ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಬಾಕಿ ಬಿಲ್ ಪಾವತಿ ವಿಚಾರ ಈಗ ಅಗ್ನಿಪರ್ವತವಾಗಿ ಸ್ಫೋಟಗೊಳ್ಳುವ ಮುನ್ನವೇ ಸರ್ಕಾರ ಒಂದು ಹೆಜ್ಜೆ ಹಿಂದೆ ಸರಿದಿದೆ. ಭ್ರಷ್ಟ ಶಾಸಕರ ಮತ್ತು ಕಮಿಷನ್ ದಂಧೆಯ ವಿವರಗಳನ್ನು ಸಾರ್ವಜನಿಕವಾಗಿ ಬಯಲು ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘ ನೀಡಿದ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತ ಸಿದ್ದರಾಮಯ್ಯ ಸರ್ಕಾರ, ಕಳೆದ ಮೂರು ದಿನಗಳಲ್ಲಿ ನೀರಾವರಿ ಇಲಾಖೆಗೆ 2,400 ಕೋಟಿ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಬಂಡಾಯದ ಕಿಚ್ಚು ಹತ್ತಿಸಿದ್ದ ಗುತ್ತಿಗೆದಾರರನ್ನು ಸಮಾಧಾನಪಡಿಸಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.
ಹಣ ರಿಲೀಸ್ ಮಾಡದಿದ್ದರೆ ಶಾಸಕರ ಪಟ್ಟಿ ಬೀದಿಪಾಲು: ಗುತ್ತಿಗೆದಾರರ ಖಡಕ್ ವಾರ್ನಿಂಗ್
ನವೆಂಬರ್ ಅಂತ್ಯದೊಳಗೆ 38,000 ಕೋಟಿ ರೂಪಾಯಿಗಳ ಬಾಕಿ ಬಿಲ್ ಪಾವತಿಸಬೇಕು, ಇಲ್ಲವಾದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಮತ್ತು ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕರ ಹೆಸರುಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಅಂತಿಮ ಗಡುವು ನೀಡಿತ್ತು. ಇದು ಆಡಳಿತ ಪಕ್ಷದ ಶಾಸಕರಲ್ಲಿ ಮತ್ತು ಸರ್ಕಾರದಲ್ಲಿ ಭಾರಿ ನಡುಕ ಹುಟ್ಟಿಸಿತ್ತು. ಈ ಎಚ್ಚರಿಕೆಗೆ ಬೆಚ್ಚಿಬಿದ್ದ ಸರ್ಕಾರ ಈಗ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ಮುಂದಾಗಿದೆ.
ಕೇವಲ 10 ಪರ್ಸೆಂಟ್ ಹಣಕ್ಕೆ ಗುತ್ತಿಗೆದಾರರ ಸಂಘ ಗರಂ
ನೀರಾವರಿ ಇಲಾಖೆಗೆ ಬಿಡುಗಡೆಯಾಗಿರುವ 2,400 ಕೋಟಿ ರೂಪಾಯಿಗಳು ಒಟ್ಟು ಬಾಕಿ ಇರುವ ಮೊತ್ತದ ಶೇಕಡಾ ಹತ್ತರಷ್ಟು ಮಾತ್ರ. ಇದು ಸಾಲದ ಸುಳಿಯಲ್ಲಿರುವ ಗುತ್ತಿಗೆದಾರರಿಗೆ ಕೇವಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಘದ ಅಧ್ಯಕ್ಷ ಆರ್ ಮಂಜುನಾಥ್, ಮೂರ್ನಾಲ್ಕು ತಿಂಗಳಿಗೊಮ್ಮೆ ಇಂತಹ ಸಣ್ಣ ಮೊತ್ತ ನೀಡಿದರೆ ಸಾಲಗಾರರಿಗೆ ಉತ್ತರ ನೀಡುವುದು ಹೇಗೆ? ಬಾಕಿ ಇರುವ ಇಡೀ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಣ್ಣ ಗುತ್ತಿಗೆದಾರರಿಗೆ ಅನ್ಯಾಯ ಬೃಹತ್ ಗುತ್ತಿಗೆದಾರರಿಗೆ ಮಾತ್ರ ಭಾಗ್ಯವೇ
ಸರ್ಕಾರವು ಜೇಷ್ಠತೆ ಅಥವಾ ಸೀನಿಯಾರಿಟಿ ಆಧಾರದ ಮೇಲೆ ಹಣ ಪಾವತಿಸಲು ನಿರ್ಧರಿಸಿರುವುದು ಸಣ್ಣ ಗುತ್ತಿಗೆದಾರರ ಆತಂಕಕ್ಕೆ ಕಾರಣವಾಗಿದೆ. ಹೀಗೆ ಮಾಡಿದರೆ ಕೇವಲ ಕೋಟ್ಯಂತರ ರೂಪಾಯಿಗಳ ಬೃಹತ್ ಕಾಮಗಾರಿ ನಡೆಸುವ ದೊಡ್ಡ ಗುತ್ತಿಗೆದಾರರಿಗೆ ಮಾತ್ರ ಹಣ ಸಿಗಲಿದ್ದು, ಸಣ್ಣಪುಟ್ಟ ಕೆಲಸಗಾರರು ಮತ್ತೆ ಬೀದಿಗೆ ಬೀಳುವಂತಾಗುತ್ತದೆ. ಈ ತಾರತಮ್ಯವನ್ನು ಸರಿಪಡಿಸಬೇಕು ಮತ್ತು ಎಲ್ಲರಿಗೂ ಸಮಾನವಾಗಿ ಹಣ ಹಂಚಿಕೆಯಾಗಬೇಕು ಎಂದು ಸಂಘವು ಒತ್ತಾಯಿಸಿದೆ.
ಮುಂದಿನ ಹಂತದಲ್ಲಿ ಪಿಡಬ್ಲ್ಯೂಡಿ ಬಾಕಿ ಬಿಲ್ ಗೆ ಮೋಕ್ಷ
ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಲೋಕೋಪಯೋಗಿ ಇಲಾಖೆಯ (PWD) ಗುತ್ತಿಗೆದಾರರ ಬಾಕಿ ಬಿಲ್ ಗಳಿಗೂ ಶೀಘ್ರವೇ ಅನುಮೋದನೆ ಸಿಗಲಿದೆ. ಇಲಾಖೆಗಳಿಗೆ ಮುಂದಿನ ತ್ರೈಮಾಸಿಕದಲ್ಲಿ ಸಿಗಬೇಕಿದ್ದ ಅನುದಾನವನ್ನೇ ಮುಂಚಿತವಾಗಿ ನೀಡಿ ಹಳೆಯ ಬಾಕಿ ತೀರಿಸಲು ಸರ್ಕಾರ ಯೋಜಿಸಿದೆ. ಮುಖ್ಯಮಂತ್ರಿಗಳ ಕಚೇರಿಯು ಗುತ್ತಿಗೆದಾರರ ಸಂಘದೊಂದಿಗೆ ಶೀಘ್ರವೇ ಮಹತ್ವದ ಸಭೆ ನಡೆಸಲಿದ್ದು, ಅಲ್ಲಿ ಉಳಿದ ಬಾಕಿ ಬಿಲ್ ಗಳ ವಿಲೇವಾರಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಸಾಧ್ಯತೆಯಿದೆ.
ವಿವಿಧ ಇಲಾಖೆಗಳ ಬಾಕಿ ಬಿಲ್ ಗಳ ದಂಗು ಬಡಿಸುವ ಅಂಕಿ ಅಂಶ
ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ: 13,000 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆ (PWD): 8,370 ಕೋಟಿ ರೂಪಾಯಿ
ಗ್ರಾಮೀಣ ಅಭಿವೃದ್ಧಿ (RDPR): 3,800 ಕೋಟಿ ರೂಪಾಯಿ
ಸಣ್ಣ ನೀರಾವರಿ ಇಲಾಖೆ: 3,000 ಕೋಟಿ ರೂಪಾಯಿ








