ಚಿತ್ರದುರ್ಗ : ಎರಡು ಪಕ್ಷದ ಅಭ್ಯರ್ಥಿಗಳ ಬೆಂಬಲಿಗರ ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಹೊಸದುರ್ಗ (Hosadurga) ತಾಲೂಕಿನ ಯಾದಗಟ್ಟ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ (BJP) ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ (Gulihatty Shekhar) ಬೆಂಬಲಿಗರಾಗಿರುವ ಗಿರೀಶ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿಯ ಬೆಂಬಲಿಗರಾದ ಓಂಕಾರಪ್ಪ ಎಂಬುವವರ ಗುಂಪಿನ ಮಧ್ಯೆ ದೊಡ್ಡ ಗಲಾಟೆ ನಡೆದಿದೆ.
ಗೂಳಿಹಟ್ಟಿ ಶೇಖರ್ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಯದಗಟ್ಟ ಗ್ರಾಮದ ಲಿಂಗಾಯತ (Lingayat) ಸಮುದಾಯದ ಯುವಕರನ್ನು ಕರೆ ತಂದಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಗ್ರಾಮದ ಮುಖಂಡ ಓಂಕಾರಪ್ಪನ ಗುಂಪು, ಗಿರೀಶ್ ಮನೆ ಬಳಿಗೆ ತೆರಳಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಕೆಲವರು ಮನೆಯ ಮೇಲ್ಛಾವಣೆ ಏರಿದ್ದಾರೆ. ಆದರೂ ಅಟ್ಟಾಡಿಸಿಕೊಂಡು ದೊಣ್ಣೆಯಲ್ಲಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಗುಂಪು ಘರ್ಷಣೆ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕೆಲವು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ.