ಕೋಲಾರ : ಒಂದೇ ಗ್ರಾಮದ 1 ಸಾವಿರ ಜನರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಜನರು ಗ್ರಾಮ ತೊರೆದಿದ್ದಾರೆ ಎನ್ನಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧಿಸಲು ತೆರಳಿದ್ದಕ್ಕೆ ಅಡ್ಡಿ ಪಡಿಸಿದ್ದಕ್ಕೆ ಪೊಲೀಸರು ಗ್ರಾಮಸ್ಥರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದ ಗ್ರಾಮಸ್ಥರಿಗೆ ಕಂಟಕ ಶುರುವಾಗಿದ್ದು, ಯಾರನ್ನು ಯಾವಾಗ ಬಂಧಿಸುತ್ತಾರೆ ಎಂಬ ಆತಂಕ ಜನರಲ್ಲಿದೆ.
2 ದಿನಗಳ ಹಿಂದೆ ರಾಧಾ ಎಂಬ ಮಹಿಳೆಯನ್ನು ಅವರ ಪತಿ ನಾಗೇಶ್ ಹತ್ಯೆ ಮಾಡಿದ್ದ. ಅಲ್ಲದೇ, ಅವರ ತಂದೆ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದ. ಅದೇ ಗ್ರಾಮದ ಹೋಟೆಲ್ ಒಂದರಲ್ಲಿ ಅವಿತುಕೊಂಡಿದ್ದ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿ ನಾಗೇಶ್ ಇದ್ದ ಹೋಟೆಲ್‌ಗೆ ದಾಳಿ ಮಾಡಿ ಆತನನ್ನು ಕೊಲೆ ಮಾಡಲು ಯತ್ನಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ನಂತರ ಲಘು ಲಾಠಿ ಚಾರ್ಜ್ ನಡೆಸಿದ್ದರು.
ಆದರೆ, ಗ್ರಾಮಸ್ಥರು ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಆಗ ಪೊಲೀಸರು 7 ಸುತ್ತಿನ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದ ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು. ನಂತರ ಆರೋಪಿ ನಾಗೇಶ್ ನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಆಗ ಆತ ಕೂಡ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದ. ಹೀಗಾಗಿ 10 ಜನ ಪೊಲೀಸರು ಗಾಯಗೊಂಡಿದ್ದರು. ಈ ವೇಳೆ ಆರೋಪಿಯ ಕಾಲು ಹಾಗೂ ಕೈಗೆ 5 ಸುತ್ತಿನ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ಹೀಗಾಗಿ ಗ್ರಾಮಸ್ಥರು ಬಂಧನವಾಗುವ ಭಯದಿಂದ ಊರು ತೊರೆದಿದ್ದಾರೆ.