ರಾಜ್ಯ ರಾಜಧಾನಿಯಲ್ಲಿ ಬೆಂಕಿ ಅವಘಡ Saaksha Tv
ಬೆಂಗಳೂರು: ರಾಜಧಾನಿಯ ಶಾಪಿಂಗ್ ಮಾಲ್ ಒಂದರಲ್ಲಿ ಇಂದು ಬೆಳಗಿನ ಜಾವ 3 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯು ಬನ್ನೇರುಘಟ್ಟ ರಸ್ತೆಯ ಅರಕೆರೆ ಗೇಟ್ ಬಳಿಯಿರುವ ಶಾಪಿಂಗ್ ಮಾಲ್ನಲ್ಲಿ ನಡೆದಿದೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಶಾಪಿಂಗ್ ಮಾಲ್ನ ಗ್ರೌಂಡ್ ಪ್ಲೋರ್ನಲ್ಲಿರುವ ಸೂಪರ್ ಮಾರ್ಕೆಟ್ನ ಸ್ಟೋರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೀಟ್ ನಲ್ಲಿದ್ದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 6 ಆಗ್ನಿಶಾಮಕ ವಾಹನಗಳಿಂದ ನಿರಂತರ ಎರಡು ಗಂಟೆಗಳ ಕಾರ್ಯಾಚರಣೆಯಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಶುಕ್ರವಾರ ರಾತ್ರಿಯಿಂದ ನಗರದಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಶಾಪಿಂಗ್ ಮಾಲ್ನಲ್ಲಿ ಯಾವುದೇ ಜನರು, ಸಿಬ್ಬಂದಿ ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶಾಪಿಂಗ್ ಮಾಲ್ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗುತ್ತಿದೆ.