ಜೋಗಿಮಟ್ಟಿ ಗಿರಿಧಾಮಕ್ಕೆ ಬೆಂಕಿ | ಅಪಾರ ಔಷಧಿ ಸಸಿಗಳು ನಾಶ
ಚಿತ್ರದುರ್ಗ: ಅಪಾರ ಔಷಧಿ ಸಸಿಗಳಿಂದ ಕೂಡಿದ್ದ ಚಿತ್ರದುರ್ಗದ ಜೋಗಿಮಟ್ಟಿ ಗಿರಿಧಾಮಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಔಷಧಿ ಸಸಿಗಳು, ಬೆಲೆಬಾಳುವ ಗಿಡಮರಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಸಸ್ಯ ಸಂಪತ್ತು ನಾಶವಾಗಿದೆ. ಘಟನೆಯು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ.
ಅಲ್ಲಿಯೇ ಇದ್ದ ಆಡುಮಲ್ಲೇಶ್ವರ ರಸ್ತೆಯ ಸದ್ಗುರು ಸೇವಾಶ್ರಮದವರೆಗೆ ಬೆಂಕಿ ವ್ಯಾಪಿಸಿದೆ. ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಈ ದುಷ್ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಯಾವೊಬ್ಬ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸದೇ ಕೇವಲ ಡಿ ದರ್ಜೆಯ ನೌಕರರು ಮಾತ್ರ ಬೆಂಕಿ ನಂದಿಸಲು ಮುಂದಾಗಿದ್ದರು. ಘಟನೆಯು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.