ನವದೆಹಲಿ: ಕೊಟ್ಟ ಸಾಲ ಮರಳಿ ಕೇಳಿದ್ದಕ್ಕೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಈ ಘಟನೆ ಈಶಾನ್ಯ ದೆಹಲಿಯ (Delhi) ಕಬೀರ್ ನಗರದಲ್ಲಿ ನಡೆದಿದೆ. ಮೂವರು ಸ್ನೇಹಿತರ ಮೇಲೆ ಅಪ್ರಾಪ್ತರು ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ (Delhi Shootout) ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ನದೀಮ್ ಮತ್ತು ಆತನ ಇಬ್ಬರು ಸ್ನೇಹಿತರು ಊಟಕ್ಕೆಂದು ಹೊರಗೆ ಬೈಕ್ ನಲ್ಲಿ ಹೊರಟಿದ್ದ ವೇಳೆ ಮೂವರು ಅಪ್ರಾಪ್ತರು ಬೈಕ್‌ನಲ್ಲಿ ಬಂದು 13 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನದೀಮ್ ಮತ್ತು ಆತನ ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನದೀಮ್ ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಅಪ್ರಾಪ್ತರಲ್ಲಿ ಒಬ್ಬ ನದೀಮ್‌ನಿಂದ ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಡ ಹೇರಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.