ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ : ಬಿ.ಎಸ್.ಯಡಿಯೂರಪ್ಪ
ಹಾಸನ : ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಂಕಷ್ಟದ ಮಧ್ಯೆ ನಾಯಕತ್ವ ಬದಲಾವಣೆ ವಿಚಾರವೂ ಭಾರಿ ಸದ್ದು ಮಾಡಿತ್ತು. ರಾಜ್ಯ ಬಿಜೆಪಿಯ ಕೆಲ ನಾಯಕರು ಸಿಎಂ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಲ ಶಾಸಕರು ಬಹಿರಂತವಾಗಿಯೇ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು.
ಆದ್ರೆ ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಸಿದ್ಧ ಎಂದು ಘೋಷಿಸಿಯೇ ಬಿಟ್ಟರು.
ಇದು ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಸಂಚಲನ ಸೃಷ್ಠಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಹೈಕಮಾಂಡ್ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂಲಕ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದೀಗ ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನ್ನ ಮೇಲೆ ಇರಿಸಿರುವ ವಿಶ್ವಾಸ ಉಳಿಸಿಕೊಳ್ಳಲು ಎರಡು ವರ್ಷ ಶಕ್ತಿ ಮೀರಿ ಕೆಲಸ ಮಾಡುವೆ. ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.