ಉಕ್ರೇನ್ ತೊರೆದ 12 ಸಾವಿರ ಭಾರತೀಯರು – 8 ಸಾವಿರ ಮಂದಿ ಬಾಕಿ
ಇಲ್ಲಿಯವರೆಗೆ 12 ಸಾವಿರ ಭಾರತೀಯ ಪ್ರಜೆಗಳನ್ನ ಉಕ್ರೇನ್ ನಿಂದ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. ದೆಹಲಿಯಲ್ಲಿ ಅವರು, ಉಕ್ರೇನ್ನಲ್ಲಿ ಇನ್ನೂ 8 ಸಾವಿರ ಮಂದಿ ಭಾರತೀಯರು ಉಳಿದಿದ್ದು, ಆ ಪೈಕಿ 4 ಸಾವಿರ ಜನರು ಸಂಘರ್ಷ ಪೀಡಿತ ವಲಯದಲ್ಲಿದ್ದಾರೆ.
ಉಳಿದವರು ಉಕ್ರೇನ್ನ ಪೂರ್ವ ಭಾಗದ ಗಡಿಯತ್ತ ಸಾಗಿದ್ದಾರೆ ಎಂದು ತಿಳಿಸಿದ್ದಾರೆ. ಉಕ್ರೇನ್ನಲ್ಲಿನ ಸಂಘರ್ಷ ವಲಯದ ಪರಿಸ್ಥಿತಿಯ ಬಗ್ಗೆ ಭಾರತ ಎಚ್ಚರಿಕೆಯಿಂದ ನೋಡುತ್ತಿದೆ ಎಂದು ಶ್ರೀಂಗ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಕಾರ್ಯದರ್ಶಿ, ಉಕ್ರೇನ್ ಮತ್ತು ರಷ್ಯಾ ರಾಯಭಾರಿಗಳಿಗೆ ಖಾರ್ಕಿವ್ ಮತ್ತು ಇತರ ಯುದ್ಧಪೀಡಿತ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳನ್ನು ತುರ್ತಾಗಿ ಸುರಕ್ಷಿತವಾಗಿ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಉಕ್ರೇನ್ಗೆ ಹೊಂದಿಕೊಂಡಿರುವ ರಷ್ಯಾದ ಗಡಿಗೆ, ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯ ತಂಡವನ್ನು ಕಳುಹಿಸಿದೆ. ಈ ತಂಡ, ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತಾ ವಾಪಸ್ಸಾತಿಗೆ ಸಾರಿಗೆ, ವಸತಿ ಸೇರಿದಂತೆ, ಎಲ್ಲ ಆಯ್ಕೆಗಳ ಬಗ್ಗೆ ಪರಿಶೀಲಿಸುತ್ತಿದೆ. ಖಾರ್ಕಿವ್ನಿಂದ ಭಾರತೀಯರನ್ನು ಸ್ಥಳಾಂತರಗೊಳಿಸುವುದು, ಸರ್ಕಾರದ ಅಗ್ರ ಆದ್ಯತೆಯಾಗಿದೆ, ಕೈವ್ ತೊರೆಯುವಂತೆ ಭಾರತೀಯರಿಗೆ ಸೂಚಿಸಲಾಗಿದೆ.
ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಸಿ-17 ಭಾರತೀಯ ವಾಯುಪಡೆಯ ವಿಮಾನ ರೊಮೇನಿಯಾಗೆ ತೆರಳಿದೆ. ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯ ಇನ್ನಷ್ಟು ವಿಮಾನಗಳನ್ನು ನಿಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.