ಹಾವೇರಿ: ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಒಳಜಗಳ ತಾರಕಕ್ಕೇರಿದ್ದು, ಸದ್ಯದಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಮುನ್ನೆಲೆಯಲ್ಲಿರುವ ನಾಯಕರನ್ನು ಬಿಟ್ಟು ಹೊಸ ಮುಖವೊಂದು ಅಥವಾ ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕತ್ವದ ಗೊಂದಲ, ಆಡಳಿತ ವೈಫಲ್ಯ ಹಾಗೂ ಹೈಕಮಾಂಡ್ ಅಸಹಾಯಕತೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. ಅವರ ಮಾತುಗಳ ವಿಸ್ತೃತ ವರದಿ ಇಲ್ಲಿದೆ.
ಕುರ್ಚಿ ಕಾದಾಟಕ್ಕೆ ಹೈಕಮಾಂಡ್ ಕಂಗಾಲು
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರವನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ವಿಫಲವಾಗಿದೆ. ದೆಹಲಿ ನಾಯಕರು ಈಗಾಗಲೇ ಎರಡು-ಮೂರು ಸಂಧಾನ ಸೂತ್ರಗಳನ್ನು ಮುಂದಿಟ್ಟರೂ, ಉಭಯ ನಾಯಕರು ಅದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಇದು ಪಕ್ಷದ ವರಿಷ್ಠರನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ. ಇಬ್ಬರೂ ನಾಯಕರು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವುದರಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಬೊಮ್ಮಾಯಿ ಟೀಕಿಸಿದರು.
ರೇಸ್‌ನಲ್ಲಿದೆ ಡಾರ್ಕ್ ಹಾರ್ಸ್
ರಾಜಕೀಯ ಅನಿಶ್ಚಿತತೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಬೊಮ್ಮಾಯಿ, ಸದ್ಯ ಫೋಟೋದಲ್ಲಿ ಕಾಣುತ್ತಿರುವ ಕುದುರೆಗಳು ಓಡುವುದಿಲ್ಲ. ಬದಲಿಗೆ ಈಗ ಕಣ್ಣಿಗೆ ಕಾಣದ ಕುದುರೆಯೊಂದು ರೇಸ್ ಗೆಲ್ಲುವ ಸಾಧ್ಯತೆಯಿದೆ. ಇಬ್ಬರೂ ನಾಯಕರನ್ನು ಪಕ್ಕಕ್ಕಿಟ್ಟು ಬೇರೆಯದೇ ಸೂತ್ರವನ್ನು ತಯಾರು ಮಾಡುವ ಮಾಹಿತಿ ಲಭ್ಯವಾಗಿದೆ. ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆಗಳು ಆಗುತ್ತಿದ್ದು, ಅನಿರೀಕ್ಷಿತವಾಗಿ ಡಾರ್ಕ್ ಹಾರ್ಸ್ ಎಂಟ್ರಿಯಾಗಲಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಆರಂಭವಾಗಲು ಡಿಸೆಂಬರ್ 8 ರವರೆಗೂ ಸಮಯವಿದೆ. ಅಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯ ಬಿದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸಂಗ ಎದುರಾಗಬಹುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಕುದುರೆ ವ್ಯಾಪಾರದ ಜನಕ
ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಾರೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ದೇಶದಲ್ಲಿ ಕುದುರೆ ವ್ಯಾಪಾರ ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ. 1969ರಿಂದಲೇ ಕಾಂಗ್ರೆಸ್ಸಿಗರು ಈ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. ಆಗ ಸತೀಶ್ ಜಾರಕಿಹೊಳಿ ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ, ಇತಿಹಾಸ ತೆಗೆದು ನೋಡಿದರೆ ಸತ್ಯ ತಿಳಿಯುತ್ತದೆ. ಮಹಾರಾಷ್ಟ್ರದ ಶಾಸಕರನ್ನೆಲ್ಲ ಕರೆತಂದು ವಿಲಾಸ್ ರಾವ್ ದೇಶಮುಖ್ ಅವರನ್ನು ಹಿಡಿದಿಟ್ಟುಕೊಂಡಿದ್ದು ಯಾರು? ಡಿ.ಕೆ. ಶಿವಕುಮಾರ್ ಅವರು ಅಂದು ನಡೆಸಿದ ರೆಸಾರ್ಟ್ ರಾಜಕೀಯ ಜಗಜ್ಜಾಹಿರಾಗಿದೆ ಎಂದು ಖಾರವಾಗಿ ಉತ್ತರಿಸಿದರು.
ಖಜಾನೆ ಖಾಲಿ ಕೇಂದ್ರದ ಮೇಲೆ ಗೂಬೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರೈತರಿಂದ ಮೆಕ್ಕೆಜೋಳ ಖರೀದಿ ಮಾಡುವ ವಿಚಾರದಲ್ಲೂ ಸರ್ಕಾರ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿದೆ. ತಮ್ಮಲ್ಲಿ ಹಣವಿಲ್ಲದ ಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲು ಆದೇಶ ನೀಡಿದ್ದರೂ, ಈವರೆಗೂ ಎಜೆನ್ಸಿ ನಿಗದಿ ಮಾಡಿಲ್ಲ ಮತ್ತು ಹಣವನ್ನೂ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.







