ಅಮರಾವತಿ: ನನ್ನ ಸಹೋದರ ಹಾಗೂ ಆಂಧ್ರಪ್ರದೇಶದ (Andhra Pradesh) ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ನನ್ನ ಪಾಲಿನ ಆಸ್ತಿ ನೀಡಿಲ್ಲ ಎಂದು ಅವರ ಸಹೋದರಿ ಹಾಗೂ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷೆ ಶರ್ಮಿಳಾ (Y. S. Sharmila) ಆರೋಪಿಸಿದ್ದಾರೆ.
ನಮ್ಮ ತಂದೆಯ ಆಸ್ತಿಗೆ ಜಗನ್ ಏಕೈಕ ಉತ್ತರಾಧಿಕಾರಿಯಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಜೀವಿತಾವಧಿಯಲ್ಲಾಗಲಿ ಅಥವಾ ಅವರ ನಿಧನದ ನಂತರ ಯಾವುದೇ ಆಸ್ತಿ ವರ್ಗಾವಣೆ ಆಗಿಲ್ಲ ಎಂದು ಆರೋಪಿಸಿದ್ದಾರೆ.
ವೈಎಸ್ಆರ್ ಅವರ ಆಸ್ತಿ ಅವರ ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆ ರೀತಿ ಹಂಚಿಕೆ ಮಾಡುವುದು ಜಗನ್ ಕರ್ತವ್ಯವಾಗಿದೆ ಎಂದು ಪತ್ರ ಬರೆದು ಉಲ್ಲೇಖಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸ್ವಂತ ಆಸ್ತಿ ಎಂದು ಹೇಳಿಕೊಳ್ಳುವ ಆಸ್ತಿಗಳು ವಾಸ್ತವವಾಗಿ ಕುಟುಂಬದ ಆಸ್ತಿಗಳಾಗಿವೆ. ತಮ್ಮ ತಾಯಿ ವೈ.ಎಸ್.ವಿಜಯಮ್ಮ ಅವರು ಆಸ್ತಿ ಹಂಚಿಕೆಗಾಗಿ ನೂರಾರು ಪತ್ರಗಳನ್ನು ಬರೆದಿದ್ದಾರೆ. ಆದರೂ ಜಗನ್ ಅವರ ಕಲ್ಲು ಹೃದಯ ಕರಗಿಲ್ಲ ಎಂದಿದ್ದಾರೆ.
ನನಗೆ ಆಸ್ತಿ ನೀಡದಿದ್ದರೂ ನಾನು ಎಂದಿಗೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ ಎಂದಿದ್ದಾರೆ.