ಮೈಸೂರು : ಬಿಜೆಪಿ ನಾಯಕರು ನೋಟಿಸ್ ನೀಡಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಭ್ರಷ್ಟಾಚಾರ ಆರೋಪಕ್ಕೆ ಯಾರೋ ನೀಡಿರುವ ನೋಟಿಸ್ ಗೆ ಯಾವ ಲಾಯರ್ ಹೆದರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಭ್ರಷ್ಟಾಚಾರ ಆರೋಪಕ್ಕೆ ನೋಟಿಸ್ ನೀಡಿದ್ದಾರೆ. ನೋಟಿಸ್ ಬಂಡವಾಳ ಏನೆಂದು ನನಗೆ ಗೊತ್ತಿಲ್ವಾ? ನಾನೂ ಲಾಯರ್ ತಾನೆ, ನೋಟಿಸ್ ಬಗ್ಗೆ ನನಗೆ ಗೊತ್ತಿಲ್ವಾ? ನಾನೇನು ನೋಟಿಸ್‌ಗೆ ಹೆದರಿಕೊಳ್ತೀನಾ? ಅದ್ಯಾರೋ ನೋಟಿಸ್ ಕೊಟ್ಟಿದ್ದಾರೆ. ನಾನು ಆರೋಪ ಮಾಡಿರೋದು ಸರ್ಕಾರದ ಮೇಲೆ. ಯಾರೋ ನೋಟಿಸ್ ಕೊಟ್ಟರೆ ಏನ್ ಪ್ರಯೋಜನ ಎಂದು ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.
ಇದೇ ವೇಳೆ ಹೊಬ್ಲೋಟ್ ವಾಚ್ ವಿಚಾರದ ಬಗ್ಗೆ ಬಿಜೆಪಿಗರ ಟೀಕೆ ಬಗ್ಗೆ ಮಾತನಾಡಿದ ಸಿದ್ದು, ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ. ಮತ್ಯಾಕೆ ಅದು? ನಾನು ಯಡಿಯೂರಪ್ಪರ ಹಳೇ ಕೇಸ್ ಬಗ್ಗೆ ಮಾತಾಡ್ಲಾ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ವಾಚ್ ವಿಚಾರ ಮುಗಿದು ಹೋಗಿದೆ. ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸಿದ್ದರಾಮಯ್ಯ, ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ನಾ? ಅದನ್ನು ಯಾರೋ ಕೊಟ್ಟಿದ್ರು. ಅದಕ್ಕೆ ಅವರು ಅಫಿಡವಿಟ್ ಕೊಟ್ಟಿದ್ದಾರೆ. ಈಗ ಆ ವಿಷಯ ಮತ್ಯಾಕೆ ತೆಗೆದಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.