ಮಂಡ್ಯ: ಸಕ್ಕರೆ ನಾಡು ಮಂಡ್ಯದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮುಂದಿನ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲು ರಣಕಹಳೆ ಊದಿದ್ದು, ಮದ್ದೂರು ಕ್ಷೇತ್ರದಿಂದಲೇ ತಮ್ಮ ಸ್ಪರ್ಧೆ ಖಚಿತ ಎನ್ನುವ ಮೂಲಕ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಹತ್ವದ ಸುಳಿವು ನೀಡಿದರು.
ನಾನು ಈಗಾಗಲೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಪಕ್ಷದ ವರಿಷ್ಠರು ಮತ್ತು ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧಳಾಗಿರುತ್ತೇನೆ. ಆದರೆ, ಸ್ಪರ್ಧೆಗೆ ಕ್ಷೇತ್ರ ಯಾವುದು ಎಂಬ ಪ್ರಶ್ನೆಗೆ ನನ್ನ ಮೊದಲ ಮತ್ತು ಪ್ರಮುಖ ಆಯ್ಕೆ ಮದ್ದೂರು ವಿಧಾನಸಭಾ ಕ್ಷೇತ್ರವಾಗಿದೆ ಎಂದು ಸುಮಲತಾ ನೇರವಾಗಿಯೇ ನುಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದ ಸ್ವಾಭಿಮಾನಿ ಜನರ ಬೆಂಬಲದೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದೆ. ಈಗ ರಾಷ್ಟ್ರೀಯ ಪಕ್ಷದ ಜೊತೆಗಿರುವುದರಿಂದ ಪಕ್ಷದ ನಿರ್ಧಾರದಂತೆ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಂಬರೀಶ್ ಕರ್ಮಭೂಮಿ ಮದ್ದೂರು
ಮದ್ದೂರು ಕ್ಷೇತ್ರಕ್ಕೂ ಅಂಬರೀಶ್ ಕುಟುಂಬಕ್ಕೂ ಇರುವ ಭಾವನಾತ್ಮಕ ನಂಟನ್ನು ಬಿಚ್ಚಿಟ್ಟ ಸುಮಲತಾ, ಮದ್ದೂರು ನನ್ನ ಪತಿ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ರಾಜಕೀಯ ಕರ್ಮಭೂಮಿಯಾಗಿದೆ. ಹೀಗಾಗಿ ಇಲ್ಲಿನ ಜನರೊಂದಿಗೆ ನಮಗೆ ಅವಿನಾಭಾವ ಸಂಬಂಧವಿದೆ. ಅಂಬಿ ಅಭಿಮಾನಿಗಳ ಅಪೇಕ್ಷೆಯೂ ಇದೇ ಆಗಿದ್ದು, ನಾನು ಅಥವಾ ನನ್ನ ಪುತ್ರ ಅಭಿಷೇಕ್ ಅಂಬರೀಶ್ ಇಬ್ಬರಲ್ಲಿ ಯಾರೇ ಸ್ಪರ್ಧಿಸಿದರೂ ಅದು ಮದ್ದೂರು ಕ್ಷೇತ್ರದಿಂದಲೇ ಎಂದು ಖಡಕ್ ಆಗಿ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಬಿಜೆಪಿ ನಾಯಕರು ಮದ್ದೂರಿನಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದರು, ಆದರೆ ಅಂದು ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಮಾಡಿರಲಿಲ್ಲ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ತಮ್ಮ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅವರು, ಅಭಿಷೇಕ್ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರನಾಗಿದ್ದಾನೆ. ಆದರೆ ರಾಜಕೀಯಕ್ಕೆ ಬರುವ ನಿರ್ಣಯವನ್ನು ಆತ ಏಕಾಏಕಿ ತೆಗೆದುಕೊಳ್ಳುವುದಿಲ್ಲ. ಸೂಕ್ತ ಸಮಯದಲ್ಲಿ ತಂದೆ ಅಂಬರೀಶ್ ಅವರ ಒಡನಾಡಿಗಳು, ಹಿರಿಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಕಾಂಗ್ರೆಸ್ ಒಳಜಗಳದ ಬಗ್ಗೆ ಟೀಕೆ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕುರ್ಚಿಯ ಹಗ್ಗಜಗ್ಗಾಟದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಅಧಿಕಾರಕ್ಕಾಗಿ ಗೊಂದಲಗಳು ನಡೆಯುವುದು ಸಹಜ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಕುರ್ಚಿ ಕಾಳಗ ಈಗ ಅತಿರೇಕಕ್ಕೆ ಹೋಗಿದೆ. ಇದು ಅವರ ಆಂತರಿಕ ವಿಚಾರವಾದರೂ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದನ್ನು ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಅಂಬರೀಶ್ ಮಾತನಾಡಿ, ಯಾವುದೇ ರಾಜಕೀಯ ತೀರ್ಮಾನಗಳನ್ನು ಕುಟುಂಬ ಮತ್ತು ಹಿರಿಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನಕೆರೆ ಶಶಿಕುಮಾರ್, ಕೋಣಸಾಲೆ ಜಯರಾಮ, ಆರ್.ಎನ್.ಗಿರೀಶ್, ಶಿವಲಿಂಗಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ, ಸುಮಲತಾ ಅಂಬರೀಶ್ ಅವರು ಈಗಿನಿಂದಲೇ ಮದ್ದೂರು ಕ್ಷೇತ್ರದ ಮೇಲೆ ಕರವಸ್ತ್ರ ಹಾಕಿದ್ದು, ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.






