ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಸಂತನ್ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸಂತನ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆನಂತರ ತಿರುಚ್ಚಿಯ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ನವೆಂಬರ್ 11, 2022 ರಂದು, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ನಳಿನಿ, ಶ್ರೀಹರನ್, ಸಂತನ್, ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ರವಿಚಂದ್ರನ್ 32 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು.
ಆದರೆ, ನಳಿನಿ ಮತ್ತು ರವಿಚಂದ್ರನ್ ಗೆ ಮಾತ್ರ ಬಿಡುಗಡೆ ಭಾಗ್ಯ ಸಿಕ್ಕಿತ್ತು. ಆದರೆ, ಉಳಿದ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದರಿಂದಾಗಿ ತಿರುಚ್ಚಿ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಸಂತನ್ ಅಲ್ಲಿಂದಲೇ ಪತ್ರ ಬರೆದಿದ್ದ. ತಮ್ಮ ದೇಶಕ್ಕೆ ಮರಳಲು ಧ್ವನಿ ಎತ್ತುವಂತೆ ವಿಶ್ವದಾದ್ಯಂತದ ತಮಿಳರಿಗೆ ಮನವಿ ಮಾಡಿದ್ದ. 32 ವರ್ಷಗಳಿಂದ ತಾಯಿ ನೋಡಿಲ್ಲ ಎಂದು ಕೂಡ ಹೇಳಿದ್ದ.








