ಮದುವೆ ಮೆರವಣಿಗೆ ವೇಳೆ ಡಿಜೆ ಲಾರಿ ಹರಿದು ನಾಲ್ವರ ಸಾವು – 10 ಮಂದಿ ಗಾಯ…
ಮದುವೆ ಮೆರವಣಿಗೆಯ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಹೊತ್ತಿದ್ದ ಮಿನಿ ಲಾರಿ ಹರಿದು ನಾಲ್ವರು ಸಾವನ್ನಪ್ಪಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕಲಬುರುಗಿ ಜಿಲ್ಲೆ ಸೇಡಂ ತಾಲೋಕಿನಲ್ಲಿ ಘಟಿಸಿದೆ.
ಬುಧವಾರ ತಡರಾತ್ರಿ ಸೇಡಂ ತಾಲೋಕಿನ ಕಡತಾಲ ತಾಂಡದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೆದಕ ತಾಂಡಾದ ಸುಗಣಾಬಾಯಿ ಚೌವ್ಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30) ಹಾಗೂ ಕುಮಾರನಾಯಕ ರಾಥೋಡ್ (35) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಮದನಾ ತಾಂಡದ ಯುವಕ ಹಾಗೂ ಕಡತಾಲ ತಾಂಡಾದ ಯುವತಿಯ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ ದಿನ (ಬುಧವಾರ) ಮದುಮಗಳನ್ನು ಕಡತಾಲ ತಾಂಡಾಕ್ಕೆ ಕರೆದುಕೊಂಡು ಬರಲಾಗಿದೆ. ಮದುಮಗಳನ್ನು ಸ್ವಾಗತಿಸಲು ತೆಲಂಗಾಣದಿಂದ ತರಿಸಲಾಗಿದ್ದ ಡಿಜೆ ಹಾಕಿ ರಾತ್ರಿ ಮೆರವಣಿಗೆ ನಡೆಯುತ್ತಿತ್ತು. ಬೇರೆ ಊರುಗಳಿಂದ ಆಗಮಿಸಿದ್ದ ನೆಂಟರು, ಸಂಬಂಧಿಕರು, ಕುಣಿದು ಸಂಭ್ರಮಿಸುತ್ತಿದ್ದರು.
ಈ ಸಂದರ್ಭದಲ್ಲಿ ಡಿಜೆ ಲಾರಿ ಏಕಾಏಕಿ ಜನರ ಮೇಲೆ ಹರಿದಿದೆ. ಲಾರಿಯಲ್ಲಿ ಚಾಲಕ ಇಲ್ಲದಿದ್ದಾಗ ಅಪರಿಚಿತನೊಬ್ಬ ಸೆಲ್ಫ ಹೊಡೆದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಪರಿಣಾಮ 4 ಮಂದಿ ಸಾವನ್ನಪ್ಪಿದ್ದು 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಮುಧೋಳ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿಜೆ ಮತ್ತು ಜನರೇಟರ್ ಇರಿಸಲಾಗಿದ್ದ ಮಿನಿ ಲಾರಿಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.