ತೀವ್ರ ಅಪಾಯದಲ್ಲಿದೆ ಗಂಗಾವಳಿ ನದಿ ತೀರದ ಅಕ್ಕೋಡ್ ಜನವಸತಿ ಪ್ರದೇಶ. ಬಿಟ್ಟುಬಿಡದಂತೆ ಸುರಿಯುತ್ತಿದೆ ಕುಂಭದ್ರೋಣ ಮಳೆ, ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ ಗಂಗಾವಳಿ ಪ್ರವಾಹ..
ನದಿ ಪಾತ್ರದ ಮನೆಯಂಗಳ ತಲುಪಿದೆ ನದಿ ನೀರು.. ಗದ್ದೆ ತೋಟಗಳು ಭಾಗಶಃ ಮುಳುಗಿವೆ.. ರುದ್ರರಮಣೀಯ ದೃಶ್ಯಕ್ಕೆ ಸಾಕ್ಷಿಯಾಗಿದೆ ಲಂಡನ್ ಬ್ರಿಡ್ಜ್ ತೂಗುಸೇತುವೆ. ಎತ್ತ ಕಣ್ಣು ಹಾಯಿಸಿದರೂ ಕೆಂಪು ಪ್ರವಾಹ ನೆಲವನ್ನು ಆವರಿಸಿ ಹರಿಯುತ್ತಿದೆ. ಆದರೂ ತಗ್ಗುಪ್ರದೇಶದಲ್ಲಿರುವ ಮೀನುಗಾರರ ಬಸದಿಯಲ್ಲಿನ ಜನ ಎಡಗೈನಲ್ಲಿ ಜೀವ ಹಿಡಿದು ಕೂತಿದ್ದಾರೆ. ಸತತ ಮಳೆಯ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೊಬೈಲ್ ನೆಟ್ವರ್ಕ್ ಕ್ಷೀಣವಾಗಿದೆ. ಅತ್ತ ಶೀರೂರು ಗುಡ್ಡ ಕುಸಿದ ಕಾರಣ ಗಂಗಾವಳಿ ನದಿ ಪಾಲಾಗಿರುವ ಟ್ಯಾಂಕರ್ ಸೋರಿಕೆಯಾಗಿ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.
ಇವಿಷ್ಟು ನಾನು ಕಣ್ಣಾರೆ ಕಂಡು ಬಂದ ಸಂಗತಿಗಳು. ನಾನು ಕಳೆದ ಮೂರು ದಿನದಿಂದ ಅಂಕೋಲಾದಲ್ಲಿದ್ದೇನೆ. ಪರಿಸರ ಸೂಕ್ಷ್ಮ ಪ್ರದೇಶಗಳಾಗಿರುವ ಅಂಕೋಲಾ-ಕಾರವಾರ ಹೇಗೆ ವರುಣಾಘಾತದಿಂದ ನಲುಗುತ್ತಿದೆ ಎಂಬುದಕ್ಕೆ ಪ್ರತ್ಯಕ್ಷದರ್ಶಿ ನಾನು. ಇವತ್ತು ಗಂಗಾವಳಿ ಹಿನ್ನೀರು ಪ್ರದೇಶ ಹಿಚ್ಕಡ್ ಸಮೀಪದಲ್ಲಿರುವ ಬಂಕಿಕೊಡ್ಲ, ಅಡಿಗೋಣ ಗ್ರಾಮಗಳಿಗೆ ತೆರಳಿದ್ದ ಸಂದರ್ಭದಲ್ಲಿ ನಾನು ಕಂಡ ದೃಶ್ಯಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ. ಗಂಗಾವಳಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆ ನಿಯಂತ್ರಣಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಇನ್ನು ಮೂರು ದಿನ ಮಳೆ ಹೀಗೆ ಸುರಿದರೆ, ನಾನು ಭೇಟಿ ನೀಡಿದ್ದ ಲಂಡನ್ ಬ್ರಿಡ್ಜ್ ತೀರದ ಎಲ್ಲಾ ಮೀನುಗಾರರ ವಸಾಹತು ಸಂಪೂರ್ಣ ಮುಳುಗಡೆಯಾಗುವುದು ಖಂಡಿತ. ತಗ್ಗು ಪ್ರದೇಶದಲ್ಲಿರುವ ಆ ಮನೆಗಳ ಮಂದಿಯನ್ನು ಕೂಡಲೆ ಎತ್ತರದ ಪ್ರದೇಶಕ್ಕೆ ರವಾನೆ ಮಾಡುವುದು ಸದ್ಯದ ಅನಿವಾರ್ಯತೆ. ಕುಮುಟಾ ಅಂಕೋಲಾ ತಾಲೂಕು ಆಡಳಿತ ಹಾಗೂ ಕಾರವಾರ ಜಿಲ್ಲಾಡಳಿತ ಕೂಡಲೆ ಕ್ರಮ ಕೈಗೊಳ್ಳಬೇಕಿದೆ. ಮುಂದೆ ಅಪಾಯವಾಗುವ ಮೊದಲೆ ಎಚ್ಚೆತ್ತುಕೊಳ್ಳುವುದು ಒಳಿತು.
ಕುಂಭದ್ರೋಣ ಮಳೆ ಹಾಗೂ ಗಂಗಾವಳಿ ಜಲಪ್ರವಾಹದ ಕೆಲವು ಸಾಕ್ಷಿಗಳು ಈ ಪೋಸ್ಟ್ ಜೊತೆಗೆ ಅಪ್ಲೋಡ್ ಮಾಡುತ್ತಿದ್ದೇನೆ. ಎಲ್ಲವೂ ಸುಖಾಂತ್ಯಗೊಳ್ಳಲಿ ಎಲ್ಲರೂ ಈ ಸಂಕಷ್ಟದಿಂದ ಪಾರಾಗಲಿ ಎಂಬ ಪ್ರಾರ್ಥನೆ ಆ ಜಗನ್ಮಾತೆಯಲ್ಲಿ..
-ವಿ.ಭಾ








