ಗುಜರಾತ್ ರಾಜ್ಯದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿರುವ ಪ್ರಕರಣವೊಂದು ನಡೆದಿದ್ದು, ಘಟನೆಯಲ್ಲಿ 28 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ ನ ಭರೂಚ್ ಜಿಲ್ಲೆಯ ಜಂಬೂಸರ್ ಹತ್ತಿರದ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದೆ. ವಿಷಕಾರಿ ಅನಿಲದಿಂದಾಗಿ 28 ಜನ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯ ಸರೋದ್ ಗ್ರಾಮದ ಪಿಐ ಇಂಡಸ್ಟ್ರೀಸ್ ನಲ್ಲಿನ ಟ್ಯಾಂಕ್ ನಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಸೋರಿಕೆಯಾದ ಬ್ರೋಮಿನ್ ಅನಿಲ ಉಸಿರಾಡಿದ ನಂತರ ಜನರು ಅಸ್ವಸ್ಥರಾಗಿದ್ದರು ಎನ್ನಲಾಗಿದೆ.
ಕಾರ್ಖಾನೆಯಲ್ಲಿ ಸುಮಾರು 2 ಸಾವಿರ ಕಾರ್ಮಿಕರು ಇದ್ದರು. ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವೇದಾಚ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈಶಾಲಿ ಅಹಿರ್ ತಿಳಿಸಿದ್ದಾರೆ.