ಬೆಂಗಳೂರು: ರಾಜ್ಯ ಸರ್ಕಾರದದಿಂದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ.
ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಇಳಿಕೆ ಮಾಡುವ ಕುರಿತು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ದುಬಾರಿ ಬೆಲೆಯ ಬ್ರಾಂಡ್ ಗಳ ಮದ್ಯದ ದರ ಇಳಿಕೆಯಾಗಲಿದೆ.
ಇನ್ನು ಮುಂದೆ ನೆರೆಯ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆ ಪರಿಷ್ಕರಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಅದು ಜಾರಿಯಾಗುತ್ತಿದೆ. ರಾಜ್ಯ ಸರ್ಕಾರವು 2024ರ ಜನವರಿಯಲ್ಲಿ ಬಿಯರ್ ಮೇಲಿನ ಎಇಡಿ ಹೆಚ್ಚಿಸಿತು. ಇದೇ ಮೊದಲ ಬಾರಿಗೆ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿದೆ. ಮದ್ಯ ಮಾರಾಟ ವೃದ್ಧಿ, ಅಬಕಾರಿ ತೆರಿಗೆಯ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸರಕಾರ ಎಇಡಿ ಇಳಿಕೆಯ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.