ರಾಜ್ಯದ ಜನತೆಗೆ ಸಂತಸದ ಸುದ್ದಿ. 2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಸಹಕಾರ ಇಲಾಖೆ ಜ.31ರವರೆಗೆ ಅವಕಾಶ ಕಲ್ಪಿಸಿದೆ.
ಯಶಸ್ವಿನಿ ಯೋಜನೆ ವಿವರಗಳು
ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, ನೌಕರರ ಸಹಕಾರ ಸಂಘಗಳ ಸದಸ್ಯರು ಯೋಜನೆಗೆ ಅರ್ಹರಾಗಿರುವುದಿಲ್ಲ. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದರೂ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಒಂದು ಯೋಜನೆ ಅಡಿ ಆರೋಗ್ಯ ಸೌಲಭ್ಯ ಪಡೆಯುತ್ತಿರುವವರು ಯಶಸ್ವಿನಿ ಅಡಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು ವಿವರಿಸಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಸದಸ್ಯತ್ವ ಶುಲ್ಕ
ಗ್ರಾಮೀಣ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ಆ ಕುಟುಂಬ 500 ರೂಗಳ ವಂತಿಗೆ ಭರಿಸಬೇಕು. ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ 100 ರೂಗಳ ಹೆಚ್ಚುವರಿ ವಂತಿಗೆ ನೀಡಬೇಕು. ನಗರ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ 1,000 ರೂಗಳು ಹಾಗೂ ಅದಕ್ಕಿಂತ ಹೆಚ್ಚು ಜನರಿದ್ದರೆ ತಲಾ 200 ರೂಗಳು ನಿಗದಿ ಮಾಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಉಚಿತ ಸದಸ್ಯತ್ವ
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಉಚಿತವಾಗಿ ಸದಸ್ಯತ್ವ ಪಡೆಯಬಹುದು. ಈ ಯೋಜನೆ ಅಡಿ 1650 ವಿವಿಧ ಚಿಕಿತ್ಸೆಗಳು, 478 ಐಸಿಯು ಚಿಕಿತ್ಸೆಗಳು ಸೇರಿ ಒಟ್ಟು 2,128 ಚಿಕಿತ್ಸೆಗಳಿಗೆ ನಗದುರಹಿತ ಸೌಲಭ್ಯ ದೊರಕಲಿದೆ.
ಚಿಕಿತ್ಸಾ ಅವಧಿ ಮತ್ತು ಸೌಲಭ್ಯಗಳು
ಯಶಸ್ವಿನಿ ಯೋಜನೆಯಡಿಯಲ್ಲಿ 01-04-2025 ರಿಂದ 31-03-2026 ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ. ಸಹಕಾರ ಸಂಘದ ಸದಸ್ಯರು ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದು.
ಅರ್ಹತಾ ನಿಯಮಗಳು
ಫಲಾನುಭವಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ನೆಟ್ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ಮತ್ತು ಯೋಜನೆ ಅನ್ವಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸದಸ್ಯರು ಚಿಕಿತ್ಸೆ ಪಡೆಯುವಾಗ ತಮ್ಮ ಜಾತಿ ಪ್ರಮಾಣಪತ್ರದ ಆರ್ಡಿ ನಂಬರ್ ತರುವುದು ಕಡ್ಡಾಯವಾಗಿದೆ.








