ಬೆಂಗಳೂರು: ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಹಿಳೆಯರು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಈ ಮಧ್ಯೆ ಇದೇ ಹಬ್ಬಕ್ಕೆ ಮಹಿಳೆಯರಿಗೆ ಸಿಹಿ ನೀಡಲು ಸರ್ಕಾರ ಕೂಡ ಸಿದ್ಧತೆ ಮಾಡಿಕೊಂಡಿದೆ.
ಹೌದು! ಗೃಹಲಕ್ಷ್ಮಿ (Gruhalakshmi) ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ ಎಂದ ಸರ್ಕಾರದ ಮೂಲಗಳು ಹೇಳಿವೆ. ಹೀಗಾಗಿ ಮಹಿಳೆಯರ ಮೊಗದಲ್ಲಿ ಖುಷಿ ಆವರಿಸಿದೆ.
ಮಹಿಳೆಯರಿಗೆ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿರಲಿಲ್ಲ. ಈಗ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೊದಲ ಹಂತದಲ್ಲಿ 533 ಕೋಟಿ ರೂ. ಪಾವತಿಯಾಗಲಿದೆ ಎನ್ನಲಾಗಿದೆ. ಈ ಹಂತದಲ್ಲಿ ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನುಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಮಂಜೂರಾಗಲಿದೆ. ಸರ್ಕಾರದ ಈ ಸುದ್ದಿ ಕೇಳಿ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.