ನವದೆಹಲಿ: ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂಬುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ.
NEET ಪೇಪರ್ ಸೋರಿಕೆ ಮತ್ತು UGC-NET ಕುರಿತು ಇಡೀ ದೇಶದಲ್ಲಿ ಕೋಲಾಹಲ ಎದ್ದಿದೆ. ದೇಶದ ಹಲವೆಡೆ ವಿದ್ಯಾರ್ಥಿಗಳ ಪ್ರತಿಭಟನೆಯೂ ಮುಂದುವರಿದಿವೆ. ಈ ಮಧ್ಯೆ ಮಾತನಾಡಿದ ಕೇಂದ್ರ ಸಚಿವರು, ಪಾರದರ್ಶಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ನೀಟ್ನಲ್ಲಿನ ಅಕ್ರಮಗಳು ಮತ್ತು UGC- NET ಪರೀಕ್ಷೆ ರದ್ದತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಡಾರ್ಕ್ ನೆಟ್ ನಲ್ಲಿರುವ UGC-NET ಪ್ರಶ್ನೆಪತ್ರಿಕೆಯು UGC-NET ನ ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗುತ್ತಿದೆ. ಇದು ಸ್ಪಷ್ಟವಾದ ನಂತರ ನಾವು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಕೆಲವು ಅಕ್ರಮಗಳು ಸರ್ಕಾರದ ಗಮನಕ್ಕೆ ಬಂದಿವೆ. ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.