ಗುಜರಾತ್ ಮಳೆ – 24 ಗಂಟೆಗಳಲ್ಲಿ 11 ಮಂದಿ ಸಾವು, ಇದುವರೆಗೂ 54 ಸಾವು…
ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ, ಆರು ತಾಲೂಕುಗಳಲ್ಲಿ 24 ಗಂಟೆಗಳಲ್ಲಿ 200 ಮಿಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯು ಶನಿವಾರ ಕೆಲವು ಪ್ರದೇಶಗಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುಜರಾತ್ ರಾಜ್ಯದಲ್ಲಿ ಮಳೆಯಿಂದಾಗಿ ಇದುವರೆಗೆ ಒಟ್ಟು 54 ಸಾವುಗಳು ವರದಿಯಾಗಿವೆ; ಕಳೆದ 24 ಗಂಟೆಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ನವಸಾರಿಯ ಪೂರ್ಣಾ ಮತ್ತು ಅಂಬಿಕಾ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಮತ್ತು ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ವಲ್ಸಾದ್ ಮತ್ತು ಡ್ಯಾಂಗ್ ಸೇರಿದಂತೆ ಎರಡು ಜಿಲ್ಲೆಗಳು ಮಾತ್ರ ರೆಡ್ ಅಲರ್ಟ್‌ನಲ್ಲಿವೆ ಎಂದು ತ್ರಿವೇದಿ ತಿಳಿಸಿದ್ದಾರೆ.
“24 ಗಂಟೆಗಳಲ್ಲಿ 800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ರಕ್ಷಣೆ ನಡೆದಿರುವುದು ಇದೇ ಮೊದಲು. ವಿಪತ್ತು ನಿರ್ವಹಣಾ ತಂಡಗಳು ಶ್ಲಾಘನೀಯ ಕೆಲಸ ಮಾಡಿದೆ. ಜುಲೈ 7 ರಿಂದ ಇಲ್ಲಿಯವರೆಗೆ 1,254 ಜನರನ್ನು ರಕ್ಷಿಸಲಾಗಿದೆ. ನವಸಾರಿಯಲ್ಲಿ ಒಂಬತ್ತು ಜನರನ್ನು ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಕರೆತಂದಿದೆ” ಎಂದು ತ್ರಿವೇದಿ ಹೇಳಿದರು.