ನೇಪಾಳದಲ್ಲಿ ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಯೂಟ್ಯೂಬ್, X ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಸರ್ಕಾರದ ನಿರ್ಧಾರದ ವಿರುದ್ಧ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶಾದ್ಯಂತ ಭಾರೀ ಪ್ರತಿಭಟನೆಗಳು ಜೋರಾಗಿದ್ದು, ಅಸಮಾಧಾನಿತ ಪ್ರತಿಭಟನಾಕಾರರು ನೇರವಾಗಿ ಸಂಸತ್ತಿನ ಕಟ್ಟಡವನ್ನು ಪ್ರವೇಶಿಸಲು ಯತ್ನಿಸಿದ್ದಾರೆ.
ಪರಿಸ್ಥಿತಿ ಹತೋಟಿ ತಪ್ಪಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಹಾಗೂ ರಬ್ಬರ್ ಗುಂಡಿನ ದಾಳಿ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ರಾಜಧಾನಿ ಕಠ್ಮಂಡುವಿನಲ್ಲಿ ನೇಪಾಳ ಸರ್ಕಾರ ಸೈನ್ಯವನ್ನು ನಿಯೋಜಿಸಿದೆ. ಪ್ರತಿಭಟನೆಗಳು ಮುಂದುವರಿದರೆ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ನೇಪಾಳದ ರಾಜಕೀಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಜನರ ಅಸಮಾಧಾನ ಇನ್ನಷ್ಟು ಗಂಭೀರ ಹಂತಕ್ಕೆ ತಲುಪಿದೆ.







