ರಾಜ್ಯ ರಾಜಕಾರಣದಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಇಬ್ಬರು ನಾಯಕರು ತಮ್ಮ ಸ್ಥಾನದ ಘನತೆಯನ್ನು ಮರೆತು, ವೈಯಕ್ತಿಕ ನಿಂದನೆ ಮತ್ತು ಏಕವಚನ ಪ್ರಯೋಗಗಳ ಮೂಲಕ ಬೀದಿ ಜಗಳದ ಮಟ್ಟಕ್ಕೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಂತದಲ್ಲಿ, ಇಬ್ಬರಿಗೂ ಗುರುವಾಗಿದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ರಂಗಪ್ರವೇಶಿಸಿ, ಸಾಮಾಜಿಕ ಜಾಲತಾಣದ ಮೂಲಕವೇ ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ.
ಕಿತ್ತಾಟಕ್ಕೆ ಕಾರಣವಾದ ಮಾತುಗಳು
ಚುನಾವಣಾ ಫಲಿತಾಂಶದ ನಂತರ ಆರಂಭವಾದ ಈ ಜಗಳ, ಇತ್ತೀಚೆಗೆ ವೈಯಕ್ತಿಕ ನಿಂದನೆಯ ಸ್ವರೂಪ ಪಡೆದುಕೊಂಡಿತ್ತು. ಮೈಸೂರಿನಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, “ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್. ನಮ್ಮ ತಂದೆ ವಯಸ್ಸಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಮಗನೇ,” ಎಂದು ತೀಕ್ಷ್ಣವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, “ಏನ್ ಪ್ರತಾಪ್ ಸಿಂಹ, ಇನ್ನೊಂದ್ ಸಲ ರಿವೈಂಡ್ ಮಾಡ್ಕೊಂಡು ನೋಡು ಮಗನೇ. ಬೆಳಗ್ಗೆ ಕೂದಲೆಲ್ಲಾ ಬಾಚಿಕೊಳ್ಳದೆ ಪ್ರೆಸ್ ಮೀಟ್‌ಗೆ ಬರ್ತೀಯಲ್ಲ, ಆಗ ನಿನ್ನನ್ನು ನೀನು ನೋಡಿಕೋ. ಮುಳ್ಳು ಹಂದಿ ನೀನಾ ನಾನಾ ಎಂದು ಗೊತ್ತಾಗುತ್ತದೆ,” ಎಂದು ಖಾರವಾಗಿ ಉತ್ತರಿಸಿದ್ದರು.
ಗುರು ವಿಶ್ವೇಶ್ವರ ಭಟ್ಟರ ಬುದ್ಧಿವಾದ
ಈ ಇಬ್ಬರು ನಾಯಕರ ಅಸಂಸದೀಯ ಪದಗಳ ವಿನಿಮಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿ, ಇಬ್ಬರ ಬೆಂಬಲಿಗರ ನಡುವೆಯೂ ಕದನಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿರುವ ವಿಶ್ವೇಶ್ವರ ಭಟ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
“ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ಇಬ್ಬರೂ ನನಗೆ ಬೇಕಾದವರೇ. ಇಬ್ಬರೂ ತಳಮಟ್ಟದಿಂದ, ಯಾವುದೇ ಹಿನ್ನೆಲೆಯಿಲ್ಲದೆ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ರಾಜಕಾರಣದಲ್ಲಿ ಪರಸ್ಪರ ಟೀಕೆ, ಟಿಪ್ಪಣಿಗಳು ಸಹಜ. ಆದರೆ ಅದು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿಯಬಾರದು. ನೀವಿಬ್ಬರೂ ಒಮ್ಮೆ ಸಮಾಧಾನದಿಂದ ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ. ಈ ಕಿತ್ತಾಟವನ್ನು ಇಲ್ಲಿಗೆ ನಿಲ್ಲಿಸಿ, ಸಾಕು, ಸಾಕು,” ಎಂದು ಹಿತವಚನ ಹೇಳಿದ್ದಾರೆ.
ಗುರು-ಶಿಷ್ಯರ ಹಿನ್ನೆಲೆ
ವಿಶ್ವೇಶ್ವರ ಭಟ್ ಅವರು ಪತ್ರಿಕಾರಂಗದಲ್ಲಿದ್ದಾಗ ಪ್ರತಾಪ್ ಸಿಂಹ ಅವರ ಗುರುವಾಗಿ ಮಾರ್ಗದರ್ಶನ ನೀಡಿದ್ದರು. ಅದೇ ರೀತಿ, ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಪ್ರದೀಪ್ ಈಶ್ವರ್ ಕೂಡ ಭಟ್ಟರ ಒಡನಾಟದಲ್ಲಿದ್ದರು. ಯಾವುದೇ ರಾಜಕೀಯ ಅಥವಾ ಶ್ರೀಮಂತ ಕುಟುಂಬದ ಹಿನ್ನೆಲೆಯಿಲ್ಲದೆ, ಸ್ವಜನಪಕ್ಷಪಾತದ ನೆರಳಿಲ್ಲದೆ, ಕೇವಲ ಸ್ವಂತ ಸಾಮರ್ಥ್ಯದಿಂದ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡ ಈ ಇಬ್ಬರೂ ನಾಯಕರಿಗೆ ಭಟ್ಟರು ಆರಂಭದ ದಿನಗಳಲ್ಲಿ ಸ್ಫೂರ್ತಿಯಾಗಿದ್ದರು.
ಗುರುವಿನ ಈ ಬುದ್ಧಿವಾದದ ನಂತರವಾದರೂ ಇಬ್ಬರೂ ನಾಯಕರು ತಮ್ಮ ಜಗಳವನ್ನು ನಿಲ್ಲಿಸಿ, ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆಯೇ ಎಂಬುದನ್ನು ರಾಜ್ಯದ ಜನತೆ ಗಮನಿಸುತ್ತಿದೆ. ಗುರುವಿನ ಮಾತಿಗೆ ಶಿಷ್ಯರು ಬೆಲೆ ಕೊಟ್ಟು ಈ ಬೀದಿ ಜಗಳಕ್ಕೆ ಪೂರ್ಣವಿರಾಮ ಹಾಕುತ್ತಾರೆಯೇ ಎಂದು ಕಾದು ನೋಡಬೇಕಿದೆ.








