ಸಿಎಂ ಬದಲಾವಣೆ | ಹೆಚ್ ಡಿ ಕೆ ಹೇಳಿದ್ದೇನು..?
ಮಂಡ್ಯ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜುಲೈ 26ಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನನಗೆ ಸಂಬಂಧಿಸಿದ ವಿಷಯ ಅಲ್ಲ, ಅದು ಬಿಜೆಪಿ ಆಂತರಿಕ ವಿಚಾರ. ಅವರ ಪಕ್ಷದ ನಿರ್ಧಾರದಲ್ಲಿ ನಾನು ಮೂಗು ತೂರಿಸುವುದು ಶೋಭೆತರುವುದಿಲ್ಲ ಎಂದರು.
ಇದೇ ವೇಳೆ ಬಿಎಸ್ವೈಗೆ ಮಠಾಧೀಶರ ಬೆಂಬಲ ಬಗ್ಗೆ ಮಳವಳ್ಳಿಯಲ್ಲಿ ಹೆಚ್ ಡಿಕೆ ಮಾತನಾಡಿ, ಈ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ.
ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ, ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯೋ ತಪ್ಪೋ ನಿರ್ಧಾರ ಜನರದ್ದು.
ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ 2 ವರ್ಷಗಳಿಂದ ನಡೆಯುತ್ತಿದೆ. ಸದ್ಯ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.
ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಆದಷ್ಟು ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ ಎಂದು ಮನವಿ ಮಾಡಿಕೊಂಡರು.
ನಾಳಿದ್ದು ರಾಜೀನಾಮೆ ನೀಡ್ತಾರೆ ಎನ್ನುತ್ತಿದ್ದಾರೆ, ಅದೇನೋ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ನೀಡ್ತಿದ್ದಾರೆ.
ನೀರಾವರಿ ಇಲಾಖೆಯ 4 ನಿಗಮಗಳಲ್ಲಿ 12ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡಿದ್ದಾರೆ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ.
ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನ ಈ ಭಾಗಕ್ಕೂ ನೀಡಿ. ಇಲ್ಲಿನ ಜನ ನಿಮಗೇನು ದ್ರೋಹ ಮಾಡಿದ್ದಾರೆ.? ನೀವು ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ ಎಂದು ಪ್ರಶ್ನಿಸಿದರು.