ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ, ಕುರುಬ ಸಮುದಾಯದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (79) ಅವರ ಸುದೀರ್ಘ ರಾಜಕೀಯ ಪಯಣಕ್ಕೆ ತೆರೆ ಬಿದ್ದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಐದು ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಜನಸೇವೆ ಮಾಡಿದ್ದ ಮೇಟಿ ಅವರ ರಾಜಕೀಯ ಬದುಕಿನಲ್ಲಿ, ಕ್ಲೀನ್‌ಚಿಟ್ ಸಿಕ್ಕರೂ ಕೊನೆಯವರೆಗೂ ಅಳಿಸಲಾಗದ ಕಪ್ಪುಚುಕ್ಕೆಯಾಗಿ ಉಳಿದಿದ್ದು 2016ರ ರಾಸಲೀಲೆ ಸಿಡಿ ಪ್ರಕರಣ.
ಕಾಂಗ್ರೆಸ್‌ಗೆ ಮುಜುಗರ ತಂದಿದ್ದ ಸಿಡಿ ಪ್ರಕರಣ
2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್.ವೈ. ಮೇಟಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಆಘಾತ ನೀಡಿದ್ದು 2016ರ ಡಿಸೆಂಬರ್‌ನಲ್ಲಿ ಬಯಲಾದ ಅಶ್ಲೀಲ ಸಿಡಿ ಪ್ರಕರಣ. ಟಿವಿ ಮಾಧ್ಯಮಗಳಲ್ಲಿ ಮೇಟಿ ಅವರದ್ದು ಎನ್ನಲಾದ ವಿಡಿಯೋ ಪ್ರಸಾರವಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಇದು ತೀವ್ರ ಮುಜುಗರ ಉಂಟುಮಾಡಿತ್ತು.
ವಿಷಯ ತಿಳಿಯುತ್ತಿದ್ದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಧಾವಿಸಿದ್ದ ಮೇಟಿ, ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. “ಇದು ನನ್ನ ವಿರುದ್ಧದ ರಾಜಕೀಯ ಸಂಚು, ಇದರಲ್ಲಿ ನನ್ನದೇನೂ ತಪ್ಪಿಲ್ಲ” ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದರು.
‘ಈ ವಯಸ್ಸಿಗೆ ಇದೆಲ್ಲಾ ಬೇಕಿತ್ತಾ?’: ಸಿಟ್ಟಾಗಿದ್ದ ಸಿದ್ದರಾಮಯ್ಯ
ಆದರೆ, ಈ ಪ್ರಕರಣದಿಂದ ತೀವ್ರವಾಗಿ ಕೆರಳಿದ್ದ ಸಿದ್ದರಾಮಯ್ಯ, ಮೇಟಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಸುಮ್ಮನೆ ಕುಳಿತುಕೊಳ್ಳಿ, ನೀವು ನನಗೆ ದ್ರೋಹ ಮಾಡಿದ್ದೀರಿ. ಈ ವಯಸ್ಸಿನಲ್ಲಿ ನಿಮಗೆ ಇದೆಲ್ಲಾ ಬೇಕಿತ್ತಾ? ನಿಮಗೆ ನಾಚಿಕೆಯಾಗಬೇಕು. ನಾವು ಇಂತಹ ಅನೈತಿಕ ಚಟುವಟಿಕೆಗಳಿಗಾಗಿ ಬಿಜೆಪಿ ನಾಯಕರನ್ನು ದೂರುತ್ತಿದ್ದೆವು. ಈಗ ನಾವು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಂದೇ, ಡಿಸೆಂಬರ್ 7, 2016 ರಂದು ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಸಿಐಡಿಯಿಂದ ಕ್ಲೀನ್‌ಚಿಟ್, ಆದರೂ…
ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಆರಂಭದಲ್ಲಿ ವಿಡಿಯೋದಲ್ಲಿರುವುದು ತಾನಲ್ಲ ಎಂದಿದ್ದ ಸಂತ್ರಸ್ತೆ ಮಹಿಳೆ, ನಂತರ ಯು-ಟರ್ನ್ ಹೊಡೆದು ತಾನೇ ಎಂದು ಒಪ್ಪಿಕೊಂಡಿದ್ದಳು. ಸುಮಾರು ಐದು ತಿಂಗಳ ಕಾಲ ತನಿಖೆ ನಡೆಸಿದ ಸಿಐಡಿ, ಅಂತಿಮವಾಗಿ ಎಚ್.ವೈ. ಮೇಟಿ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. “ವಿಡಿಯೋವನ್ನು ತಿರುಚಲಾಗಿದೆ ಮತ್ತು ಮೇಟಿ ವಿರುದ್ಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ,” ಎಂದು ಗೃಹ ಇಲಾಖೆಗೆ ವರದಿ ಸಲ್ಲಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೇಟಿ, “ನನಗೆ ನ್ಯಾಯ ಸಿಕ್ಕಿದೆ, ಸತ್ಯಕ್ಕೆ ಜಯವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ,” ಎಂದು ನಿರಾಳರಾಗಿದ್ದರು.
ಕಪ್ಪುಚುಕ್ಕೆಯಾಗಿ ಉಳಿದ ಪ್ರಕರಣ
ಸಿಐಡಿಯಿಂದ ಕ್ಲೀನ್‌ಚಿಟ್ ಸಿಕ್ಕರೂ, ಈ ಪ್ರಕರಣವು ಮೇಟಿ ಅವರ ರಾಜಕೀಯ ಜೀವನದಲ್ಲಿ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಇದರ ನೇರ ಪರಿಣಾಮವಾಗಿ 2017ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ವೀರಣ್ಣ ಚರಂತಿಮಠ್ ವಿರುದ್ಧ ಸೋಲು ಅನುಭವಿಸಿದ್ದರು. ಸಾರ್ವಜನಿಕ ವಲಯದಲ್ಲಿ ಈ ಪ್ರಕರಣವು ಅವರ ವ್ಯಕ್ತಿತ್ವದ ಮೇಲೆ ಗಾಢ ಪರಿಣಾಮ ಬೀರಿತ್ತು.
ಮೇಟಿ ಅವರ ರಾಜಕೀಯ ಹಾದಿ
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಚ್.ವೈ. ಮೇಟಿ, ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದರು. 1989, 1992, 2004ರಲ್ಲಿ ಗಳೇದಗುಡ್ಡ ಕ್ಷೇತ್ರದಿಂದ ಮತ್ತು 2013, 2023ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1994-96ರ ಅವಧಿಯಲ್ಲಿ ಎಚ್.ಡಿ. ದೇವೇಗೌಡ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ, 1996ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.
2023ರ ಚುನಾವಣೆಯಲ್ಲಿ ಗೆದ್ದು ಮತ್ತೆ ವಿಧಾನಸಭೆ ಪ್ರವೇಶಿಸಿದ್ದರೂ, ಅವರ ಆರೋಗ್ಯ ಹದಗೆಟ್ಟಿತ್ತು. ಅಂತಿಮವಾಗಿ, ತಮ್ಮ ಸುದೀರ್ಘ ರಾಜಕೀಯ ಬದುಕಿನ ಯಶಸ್ಸು ಮತ್ತು ವಿವಾದಗಳೆರಡನ್ನೂ ಹೊತ್ತು ಮೇಟಿ ಅವರು ಇಹಲೋಕ ತ್ಯಜಿಸಿದ್ದಾರೆ.








