ಮಂಡ್ಯ: ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯು ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಶಾಂತಿಯುತವಾಗಿ ಸಾಗಬೇಕಿದ್ದ ಮೆರವಣಿಗೆಯು ಜಾಮಿಯಾ ಮಸೀದಿ ಸಮೀಪ ಬರುತ್ತಿದ್ದಂತೆಯೇ ಉದ್ವಿಗ್ನಗೊಂಡಿತು. ಮಸೀದಿ ನಮ್ಮದು ಎಂದು ಘೋಷಣೆ ಕೂಗುತ್ತಾ ಹನುಮ ಮಾಲಾಧಾರಿಗಳು ಮಸೀದಿಯ ಒಳಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದ್ದು, ಪೊಲೀಸರು ಮತ್ತು ಭಕ್ತರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಯಿತು.
ರಣರಂಗವಾದ ಜಾಮಿಯಾ ಮಸೀದಿ ವೃತ್ತ
ಶ್ರೀರಂಗಪಟ್ಟಣದ ಬೀದಿಗಳಲ್ಲಿ ಸಂಚರಿಸಿದ ಹನುಮ ಮಾಲಾಧಾರಿಗಳ ಬೃಹತ್ ಮೆರವಣಿಗೆಯು ಜಾಮಿಯಾ ಮಸೀದಿ ಮುಂಭಾಗದ ವೃತ್ತಕ್ಕೆ ತಲುಪುತ್ತಿದ್ದಂತೆಯೇ ವಾತಾವರಣದ ಸ್ವರೂಪವೇ ಬದಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮಾಲಾಧಾರಿಗಳು ಏಕಾಏಕಿ ಮಸೀದಿಯತ್ತ ಮುಖಮಾಡಿ, ಆ ಜಾಗ ನಮ್ಮದು, ನಮಗೆ ಬಿಟ್ಟುಕೊಡಿ ಎಂದು ಆಕ್ರೋಶಭರಿತ ಘೋಷಣೆಗಳನ್ನು ಕೂಗಲಾರಂಭಿಸಿದರು.
ಅಷ್ಟೇ ಅಲ್ಲದೆ, ಮಸೀದಿ ವೃತ್ತದ ರಸ್ತೆಯಲ್ಲೇ ನಿಂಬೆ ಹಣ್ಣು ಮತ್ತು ಬೂದುಗುಂಬಳಕಾಯಿಯನ್ನು ಇಟ್ಟು, ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದರು. ಕೆಲ ಮಾಲಾಧಾರಿಗಳು ಮಸೀದಿಯ ಕಾಂಪೌಂಡ್ ಬಳಿಯ ಇಳಿಜಾರಿನ ಪ್ರದೇಶದಲ್ಲಿ ಕುಂಬಳಕಾಯಿ ಒಡೆದು ದೃಷ್ಟಿ ತೆಗೆದರು. ಈ ವೇಳೆ ಭಾವುಕರಾದ ಮಾಲಾಧಾರಿಗಳ ಗುಂಪೊಂದು ಏಕಾಏಕಿ ಬ್ಯಾರಿಕೇಡ್‌ಗಳನ್ನು ಮೀರಿ ಮಸೀದಿಯೊಳಗೆ ನುಗ್ಗಲು ಪ್ರಯತ್ನಿಸಿತು.
ಜಾಮಿಯಾ ಮಸೀದಿ ವಿವಾದಿತ ಸ್ಥಳವಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ಏರ್ಪಡಿಸಿತ್ತು. ಯಾವಾಗ ಮಾಲಾಧಾರಿಗಳು ಮಸೀದಿಯತ್ತ ನುಗ್ಗಲು ಯತ್ನಿಸಿದರೋ, ತಕ್ಷಣವೇ ಎಚ್ಚೆತ್ತ ಪೊಲೀಸರು ಮಾನವ ಸರಪಳಿ ನಿರ್ಮಿಸಿ ಅವರನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ತೀವ್ರ ಸ್ವರೂಪದ ತಳ್ಳಾಟ ಮತ್ತು ನೂಕಾಟ ನಡೆಯಿತು.
ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದಾಗ ಪೊಲೀಸರು ಕಠಿಣ ನಿಲುವು ತಳೆದು, ಗುಂಪನ್ನು ಚದುರಿಸಲು ಹರಸಾಹಸ ಪಡಬೇಕಾಯಿತು. ಭಕ್ತರು ಕೇಸರಿ ಧ್ವಜಗಳನ್ನು ಹಿಡಿದು ಕುಣಿಯುತ್ತಾ, ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಕೋಮುಗಲಭೆಯೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಇದಕ್ಕೂ ಮುನ್ನ ಸಂಕೀರ್ತನಾ ಯಾತ್ರೆಯು ಗಂಜಾಂನ ಹಜರತ್ ಸೈಯದ್ ಜಹೋರ್ ಷಾವಾಲಿ ದರ್ಗಾದ ಬಳಿ ಹಾದುಹೋಗುವಾಗಲೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದರ್ಗಾದ ಎದುರು ಕುಳಿತ ನೂರಾರು ಮಾಲಾಧಾರಿಗಳು ಜೋರಾಗಿ ರಾಮಭಜನೆ ಮತ್ತು ಹನುಮ ಸಂಕೀರ್ತನೆಗಳನ್ನು ಹಾಡಿದರು. ಇಲ್ಲೂ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದರು.
ಪ್ರಸ್ತುತ ಶ್ರೀರಂಗಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು,ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.








