ಪ್ರಸಕ್ತ ಸಾಲಿನ 16ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಹೊರ ಹೊಮ್ಮಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಐದು ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಈ ಸಂದರ್ಭದಲ್ಲಿ ರನ್ನರ್ ಅಪ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಚೆನ್ನೈ ತಂಡದ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು. ಸಾಯಿ ಸುದರ್ಶನ್ (96), ಸಹಾ (54), ಶುಭಮನ್ ಗಿಲ್ (39) ಮತ್ತು ಹಾರ್ದಿಕ್ ಪಾಂಡ್ಯ (21) ರನ್ ಗಳಿಸಿ ಚೆನ್ನೈ ಎದುರು ಬೃಹತ್ ಗುರಿ ನೀಡಿದ್ದರು.
ಈ ಬೃಹತ್ ಮೊತ್ತ ಬೆನ್ನಟ್ಟಿದ್ದ ಚೆನ್ನೈ ಬ್ಯಾಟ್ಸ್ಮನ್ಗಳ ಪೈಕಿ ದೇವನ್ ಕಾನ್ವೆ (47), ಶಿವಂ ದುಬೆ (ಅಜೇಯ 32), ಅಜಿಂಕ್ಯ ರಹಾನೆ (27), ರುತುರಾಜ್ ಗಾಯಕ್ವಾಡ್ (26), ಅಂಬಟಿ ರಾಯುಡು (19), ರವೀಂದ್ರ ಜಡೇಜಾ (15) ಔಟಾಗದೆ ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಸಿಎಸ್ಕೆ 15 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 171 ರನ್ ಗಳಿಸಿತು. ಇದರ ನಡುವೆ, ಮಳೆ ವಿರಾಮದಿಂದಾಗಿ ಡಕ್ವರ್ತ್ ಲೂಯಿಸ್ ವಿಧಾನದಲ್ಲಿ ಚೆನ್ನೈಗೆ ಟಾರ್ಗೆಟ್ ನಿಗದಿಪಡಿಸಲಾಗಿತ್ತು. ಆದರೆ, ಪಂದ್ಯ ಸೋತರೂ ಪಾಂಡ್ಯ ಮಾಡಿದ್ದ ಕಮೆಂಟ್ ಗಳಿಂದ ಅಭಿಮಾನಿಗಳು ಸಂಸಗೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ, ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂಎಸ್ ಧೋನಿ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಒಳ್ಳೆಯವರಿಗೆ ಒಳ್ಳೆಯದು ಸಂಭವಿಸುತ್ತದೆ. ನನಗೆ ತಿಳಿದಿರುವ ಅತ್ಯುತ್ತಮ ವ್ಯಕ್ತಿಗಳಲ್ಲಿ ಅವರು ಒಬ್ಬರು. ದೇವರು ದಯೆ ತೋರಿಸಿದ್ದಾನೆ. ದೇವರು ನನಗೂ ದಯೆ ತೋರಿಸಿದ್ದಾನೆ. ಇಂದು ಅವರದು ಎಂದು ಪಂದ್ಯದ ನಂತರ ಹಾರ್ದಿಕ್ ಹೇಳಿದ್ದಾರೆ.
ಈ ಮೂಲಕ ಅಭಿಮಾನಿಗಳು ಪಾಂಡ್ಯ ಸಹ ಧೋನಿ ಅವರ ಅಭಿಮಾನಿ ಎಂಬಂತೆ ಹೇಳುತ್ತಿದ್ದು, ಕೆಲವರು ಗುರುವಿಗೆ ತಕ್ಕ ಶಿಷ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.