Taledand: ನಿಸರ್ಗಧಾಮದಲ್ಲಿ ಮೂಡಿದ ತಲೆದಂಡ ಚಿತ್ರಕ್ಕಿದೆ ಹರಿಕಾವ್ಯ ಸಂಗೀತ ಸ್ಪರ್ಶ..! 

1 min read
Teledanda Saaksha Tv

ನಿಸರ್ಗಧಾಮದಲ್ಲಿ ಮೂಡಿದ ತಲೆದಂಡ ಚಿತ್ರಕ್ಕಿದೆ ಹರಿಕಾವ್ಯ ಸಂಗೀತ ಸ್ಪರ್ಶ..!

ಸ್ಯಾಂಡಲ್ ವುಡ್ ನಟ ದಿ. ಸಂಚಾರಿ ವಿಜಯ್ ಅವರ ಅಭಿನಯದ ತಲೆದಂಡ ಸಿನಿಮಾ ಇದೇ ಏಪ್ರಿಲ್ 1 ರಂದು ರಿಲೀಸ್ ಆಗುತ್ತಿದೆ.

ಈ ಸಿನಿಮಾ ಒಬ್ಬ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ , ಹೋರಾಟದ ಕಥೆ ಹೊಂದಿದ್ದು ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾವಾಗಿದೆ.

ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ. ಸಿನಿಮಾದಲ್ಲಿನ ಕೆಲಸ , ಸಂಗೀತದ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೆ ತಲೆದಂಡ ಸಿನಿಮಾ ಮತ್ತು ತಾನು ಸಂಗೀತ ನಿರ್ದೇಶಕನಾಗಿ ಸಾಗಿ ಬಂದ ಹಾದಿಯನ್ನು ಹರಿಕಾವ್ಯ ಹೇಳುವುದು ಹೀಗೆ.

ತಲೆ ದಂಡ ಸಿನಿಮಾದ ಸಂಗೀತ ನಿದೇರ್ಶಕ ಹರಿ ಕಾವ್ಯ..!

ತಲೆದಂಡ ಚಿತ್ರಕಥೆ ಕೇಳ್ತಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲೀಟ್ ಚಿತ್ರಣ ಬರುತ್ತದೆ. ಆ ಚಿತ್ರಕ್ಕೆ ಸಂಗೀತ ಏನು ಮಾಡಬೇಕೆಂಬ ಯೋಚನೆ ಮಾಡಿದಾಗ ಆ ಪ್ರಕೃತಿಯ ಕಲರವವೇ ಮೊದಲು ತಲೆಗೆ ಬರುತ್ತೆ. ಹಾಗಾಗಿ ಈ ಚಿತ್ರಕ್ಕೆ ಪ್ರಕೃತಿಯೇ ಸಂಗೀತದ ಜೀವಾಳವಾಗಿದೆ ಅಂತಾರೆ ಹರಿಕಾವ್ಯ.

ಒಂದು ಹಳ್ಳಿ , ಮುಗ್ಧ ನಾಯಕ , ನಾಯಕಿ , ಎಲ್ಲಾ ಮುಗ್ಧರ ಪಾತ್ರಗಳೇ ಚಿತ್ರದಲ್ಲಿವೆ. ಅದ್ರಲ್ಲಿ ನಾಗರೀಕ ಸಮಾಜದ ಒಂದಷ್ಟು ಎಲಿಮೆಂಟ್ಸ್ , ರಾಜಕೀಯದ ಸನ್ನಿವೇಶಗಳು ಒಳಗೊಂಡಿವೆ. ಪ್ರಕೃತಿಯನ್ನು ಉಳಿಸಲು ಮುಗ್ಧ ನಾಯಕನ ಹೋರಾಟವೇ ಚಿತ್ರದ ಹೈಲೈಟ್ಸ್ ಆಗಿದೆ ಎಂಬುದು ಹರಿಕಾವ್ಯ ಅವರ ಅಭಿಮತವಾಗಿದೆ.

Teledanda Saaksha Tv

ಪ್ರಕೃತಿ ಪ್ರೇಮ, ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗರ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿರುವುದರಿಂದ ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿಕೊಳ್ಳಬೇಕಾಯ್ತು. ಪ್ರತಿ ಸನ್ನಿವೇಶಗಳಿಗೆ ಯಾವ ರೀತಿಯ ಸಂಗೀತ ನೀಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಬೇಕಾಯ್ತು. ಇನ್ನೊಂದೆಡೆ, ಜನಪದ ಗಾಯಕರನ್ನ ಸ್ಟುಡಿಯೋಗೆ ಕರೆಸಿಕೊಂಡು ಅವರಿಂದ ಹಾಡಿಸುವುದು ತುಂಬಾ ಕಾಂಪ್ಲಿಕೇಟೆಡ್ ಆಗಿತ್ತು. ರೆಕಾರ್ಡಿಂಗ್ ವೇಳೆ ಸಾಕಷ್ಟು ಶ್ರಮಪಟ್ಟಿದ್ದೇವೆ. ಪ್ರತಿ ಫ್ರೇಮ್, ಪ್ರತಿ ಬಿಟ್ ಹಾಡುಗಳಿಗೂ ತುಂಬಾನೇ ಎಫರ್ಟ್ ಹಾಕಿದ್ದೇವೆ ಎಂದು ಹೇಳ್ತಾರೆ ಹರಿಕಾವ್ಯ.

ತಲೆದಂಡ ಸಿನಿಮಾಗೆ ಶೂಟಿಂಗ್ ಗಿಂತಲೂ ಮುಂಚೆಯೇ ಬಿಟ್ ಗಳನ್ನ ರೆಡಿ ಮಾಡಿಟ್ಟುಕೊಂಡಿದ್ದೆ. ಒಟ್ಟಾರೆ 12 ಹಾಡುಗಳಿವೆ.. ಎಲ್ಲವೂ ಬಿಟ್ ಸಾಂಗ್ ಗಳು. ಕಥೆಯ ಹೊರತಾಗಿ ಯಾವುದೇ ಒಂದು ಸಣ್ಣ ತುಣಕನ್ನೂ ಬಳಸಿಕೊಂಡಿಲ್ಲ.. ಕಥೆಯ ಒಳಗೆ ಸಮ್ಮಿಲಿತವಾಗಿರುವಂತಹ ಸಂಗೀತವನ್ನು ನೀಡಿದ್ದೇನೆ ಎಂಬ ಸಮಾಧಾನ ಹರಿಕಾವ್ಯ ಅವರದ್ದು.

Teledanda Saaksha Tv

ಓವರ್ ಆಲ್ ಸಿನಿಮಾದ ಸಂಗೀತವನ್ನ ಆದಷ್ಟು ವೈಭವವಿಲ್ಲದೇ , ನ್ಯಾಚುರಲ್ ಆಗಿ ಕಥೆಗೆ ಹೊಂದಿಕೊಳ್ಳುವಂತೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಹೆಚ್ಚಾಗಿ ಭಾರತೀಯ ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಗಳನ್ನ ಬಳಸಿದ್ದೇನೆ.. ಹೆಚ್ಚು ಹಿನ್ನೆಲೆಯಲ್ಲಿ ಧ್ವನಿಯನ್ನೇ ಬಳಸಿಕೊಂಡಿದ್ದೇನೆ ಎಂದು ತಲೆ ದಂಡ ಸಿನಿಮಾದ ಸಂಗೀತದ ಬಗ್ಗೆ ಹರಿ ಕಾವ್ಯ ಹೇಳಿಕೊಂಡಿದ್ದಾರೆ.

ಇನ್ನೂ ಸಂಚಾರಿ ವಿಜಯ್ ಅವರು ಕಥೆಗೆ ತಮ್ಮ ನಟನೆ ಮೂಲಕ ಸಂಪೂರ್ಣ ಜೀವ ತುಂಬಿದ್ದಾರೆ. ಈ ತರಹದ ಒಂದು ಅದ್ಭುತವಾದ ನಟನೆಯನ್ನ ನಾನು ನೋಡಿಯೇ ಇಲ್ಲ. ನಮ್ಮ ಕನ್ನಡದಲ್ಲಿ ಇಂತಹ ಒಂದು ಅದ್ಭುತ ಸಿನಿಮಾವಾಗಿದೆ. ನಮ್ಮ ಪ್ರಕೃತಿ ಬಗ್ಗೆ ಮಾಡಿರುವಂತಹುದ್ದು ಇನ್ನೂ ದೊಡ್ಡ ವಿಶೇಷ. ಒಟ್ಟಾರೆ, ಒಂದು ಒಳ್ಳೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಖುಷಿ ಇದೆ. ಇದು ನನ್ನ ಪುಣ್ಯ ಅಂತಾರೆ ಹರಿ ಕಾವ್ಯ.

ತಲೆದಂಡ ಸಿನಿಮಾದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈ ಮೂರು ವರ್ಷಗಳ ಅನುಭವ ನನಗೆ ಸಂಗೀತದ ಮೇಲೆ ಹಿಡಿತ ಜಾಸ್ತಿಯಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳಿಗೆ ಅತ್ಯುತ್ತಮ ಸಂಗೀತ ನೀಡುವ ಹುಮ್ಮಸ್ಸು ಈ ಸಿನಿಮಾದಿಂದ ನನಗೆ ಸಿಕ್ಕಿದೆ ಎಂದು ಹೇಳ್ತಾರೆ ಹರಿಕಾವ್ಯ.

ಯಾರಿದು ಹರಿಕಾವ್ಯ.. ಸಂಗೀತ ನಿರ್ದೇಶನದಲ್ಲಿ ಸಾಗಿ ಬಂದ ಹಾದಿ ಹೇಗಿದೆ….!

ಅಂದ ಹಾಗೇ, ಹರಿಕಾವ್ಯ ಅವರು, ದೃಶ್ಯ ಕಲೆಯಲ್ಲಿ ಎಂ ಎಫ್ ಎ ಪದವೀಧರ. ಕರ್ನಾಟಕ ಸಂಗೀತದಲ್ಲಿ ಗುರುಕುಲ ಪರಂಪರೆಯಲ್ಲಿ ಸಂಗೀತವನ್ನು ಕಲಿತಿದ್ದಾರೆ. ಗಾಯನದಲ್ಲಿ ಬಳ್ಳಾರಿ ರಾಘವೇಂದ್ರ ಮತ್ತು ಡಾ. ಸಿ. ಎ ಶ್ರೀಧರ್ ಅವರ ಬಳಿ ಸುಮಾರು 15 ವರ್ಷಗಳಿಂದ ಅಭ್ಯಾಸ ಮಾಡಿದ್ದಾರೆ.

ಪಂಡಿತ್ ವೀರಭದ್ರಯ್ಯ ಹೀರೇಮಠ ಅವರ ಬಳಿಯೂ ಸಂಗೀತಾಭ್ಯಾಸ ಮಾಡಿದ್ದಾರೆ. ಇನ್ನು ಸಂಗೀತದ ಬಗ್ಗೆ ಒಲವು ಮೂಡಲು ಸಂಗೀತ ಮಾಂತ್ರಿಕ ಇಳಯರಾಜ ಅವರ ಸ್ಪೂರ್ತಿಯೇ ಕಾರಣ. ಗಿಟಾರ್ ಮತ್ತು ಪಿಯಾನೊ ವನ್ನು ರೊಲಿನ್ ಕೊಟ್ಸ್ ರವರಲ್ಲಿ ಕಲಿತು ಪರಿಣತಿಯನ್ನು ಪಡೆದುಕೊಂಡ್ರು. ನಂತರ ಸ್ವ ಇಚ್ಛೆಯಿಂದ
ಸಂಗೀತ ಸಂಯೋಜನೆಯನ್ನು ಪ್ರಾರಂಭಿಸಿದವರು

ತನ್ನದೇ ಕಲ್ಪನೆಯ ಸ್ಟುಡಿಯೊದಲ್ಲಿ ಕೆಲಸವನ್ನು ಶುರು ಮಾಡಿದ್ರು. ಚೊಚ್ಚಲ ಪ್ರಯತ್ನದಲ್ಲೆ ಸಿನೆಮಾ ಅವಕಾಶವೂ ಸಿಕ್ಕಿತ್ತು. ರಾಜೇಶ್ ಮೂಲಕ ಸಂಜೋತ ಭಂಡಾರಿಯವರ ಪರಿಚಯವಾಯ್ತು. ಅಲ್ಲದೆ ಅವರ ಮೊದಲ ಚಿತ್ರ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.

Teledanda Saaksha Tv

ನಂತರ, ವಿನಾಶಿನಿ, ಹಳ್ಳಿ ಪಂಚಾಯಿತಿ, ಆಘಾತ, ಮಾನಸ ಸರೋವರ, ಬೆಳಕಿನ ಕನ್ನಡಿ, ಹೂವಿನಹಾರ, ತಲೆದಂಡ, ಮನಸ್ಮಿತ ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಹರಿಕಾವ್ಯ ಅವರಿಗೆ ಕಿಮಾ ಪ್ರಶಸ್ತಿ ಪುರಸ್ಕಾರವೂ ಲಭಿಸಿದೆ.

ಇನ್ನು ಹರಿ ಕಾವ್ಯ ಅವರು ಕಿರುತೆರೆಯಲ್ಲೂ ಮಿಂಚಿದ್ದಾರೆ. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯಂ ತಂತು ನಾನೇನ, ತ್ರಿವೇಣಿ ಸಂಗಮಕ್ಕೂ ಸಂಗೀತ ಸಂಯೋಜನೆ ಮಾಡಿದ್ದರು.
ಜೆ ಎಸ್ ಎಸ್ ಸಂಸ್ಥೆಯ ಸುತ್ತೂರು ಗುರು ಪರಂಪರೆ ಅನಿಮೇಶನ್ ಚಿತ್ರಕ್ಕೂ ಹರಿ ಕಾವ್ಯ ಅವರ ಸಂಗೀತವಿದೆ.
ಇನ್ನೊಂದೆಡೆ, ಕೆ . ಕಲ್ಯಾಣ್, ಪ್ರೊ. ಪದ್ಮಶ್ರೀ ದೊಡ್ಡರಂಗೇಗೌಡ, ವಿಜಯ್ ಪ್ರಕಾಶ್, ಕೆ.ಎಸ್. ಚಿತ್ರಾ, ಕೈಲಾಸ್ ಖೇರ್, ಶಂಕರ್ ಮಹದೇವನ್, ಹರಿಹರನ್, ರಾಜೇಶ್ ಕೃಷ್ಣನ್, ಎಮ್.ಡಿ. ಪಲ್ಲವಿ ಮೊದಲಾದವರ ಜೊತೆ ಕೆಲಸ ಮಾಡಿದ ಅನುಭವನ್ನು ಹೊಂದಿದ್ದಾರೆ.
ಒಟ್ಟಿನಲ್ಲಿ ಹರಿಕಾವ್ಯ ಅವರು ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ಸಾಹಿತ್ಯ ರಚನಕಾರನಾಗಿಯು
ಕನ್ನಡ ಸಿನೆಮಾ ಲೊಕದಲ್ಲಿ ಗಮನ ಸೆಳೆಯುತ್ತಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd