ರಾಜ್ಯ ರಾಜಕೀಯದಲ್ಲಿ ಕಳೆದ 5–6 ದಿನಗಳಿಂದ ಸಿಎಂ ಕುರ್ಚಿ ಕುರಿತಾಗಿ ಭಾರೀ ರಾಜಕೀಯ ಕದನ ನಡೆಯುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ಬಣ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ನಾಯಕತ್ವದ ವಿಷಯವಾಗಿ ಸ್ಪಷ್ಟ ಅಸಮಾಧಾನ ವ್ಯಕ್ತವಾಗುತ್ತಿತ್ತು. ದೆಹಲಿಯಲ್ಲಿ ನಡೆದ ಚರ್ಚೆಗಳು, ಬಣದ ಶಾಸಕರ ಅಸಮಾಧಾನ, ಒಳ ಒತ್ತಡ ಸೇರಿ ರಾಜಕೀಯ ಕದನದ ವಾತಾವರಣ ನಿರ್ಮಾಣವಾಗಿತ್ತು.
ಆದರೆ ಇದೀಗ, ಈ ಜಗಳಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಏಕಾಏಕಿಯಾಗಿ ತಮ್ಮ ಕಠಿಣ ನಿಲುವನ್ನು ಬದಲಿಸಿ, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತೇವೆ. ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ತಿರುವಿಗೆ ಕಾರಣವಾಗಿದೆ.
ಈ ಹೇಳಿಕೆ ರಾಜಕೀಯ ವೀಕ್ಷಕರಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು, ಪಕ್ಷದ ಒಳಜಗಳ ಕಡಿಮೆಯಾದ ಚರ್ಚೆಗಳು ನಡೆಯುತ್ತಿವೆ.
ಇದರ ಬೆನ್ನಲ್ಲೇ, ಡಿಕೆಶಿ ಬಣದ ಶಾಸಕರು ದೆಹಲಿಯಲ್ಲಿ ತಮ್ಮ ಬೇಡಿಕೆ ನೆರವೇರುವ ಭರವಸೆ ಕಾಣದೇ, ನಿರಾಸೆಯಿಂದ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇದು ಬಣದ ಒತ್ತಡ ತಗ್ಗಿದಂತೆ ಸೂಚಿಸುತ್ತಿದೆ.








