ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ : ಹೆಚ್ ಡಿಕೆ hd-kumaraswamy
ಹಾವೇರಿ : ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾವೇರಿಯ ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಅವರು, ಕರ್ನಾಟಕದ ಆಡಳಿತ ಕನ್ನಡಿಗರಿಂದಲೇ ಎಂಬ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ.
ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಅಲ್ಲದೆ ಇದು ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ. ಕೋವಿಡ್ ಕಡಿಮೆ ಆದ ಮೇಲೆ ಜನರ ನಡುವೆ ಬರುತ್ತೇನೆ.
ನಿಮ್ಮ ಬದುಕು ಹಸನು ಮಾಡುವ ಸರ್ಕಾರ ಬೇಕಾ ಬೇಡವಾ? ಕೇಂದ್ರ ಸರ್ಕಾರ ನಂಬಿದರೆ ನಿಮಗೆ ಗೌರವ ಇಲ್ಲ. ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ಜನ ಪ್ರಯೋಜನ ಪಡೆಯುತ್ತಿದ್ದಾರೆ.
ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುತ್ತೇವೆ ಎಂದು ನುಡಿದಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡ್ತಿಲ್ಲ. ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಂದುವರೆದು ಸಚಿವ ಬಿ.ಸಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ ಡಿಕೆ, ರಾಜೀನಾಮೆ ಕೊಟ್ಟು ನನ್ನ ಸರ್ಕಾರ ತೆಗೆದ್ರಲ್ಲಾ? ಹಿರೇಕೇರೂರು ಮಹಾನ್ ಅಭಿವೃದ್ಧಿ ಆಗಿ ಬಿಡ್ತಾ ಎಂದು ಪ್ರಶ್ನಿಸಿ, ನಾನಿದ್ದಾಗ ಕೊಟ್ಟ ಅನುದಾನವೇ ಈಗಲೂ ನಡೆದಿದೆ ಎಂದರು.