ಬೆಂಗಳೂರು: ನೈಸ್ ಯೋಜನೆ ಹಗರಣದ ಕಿಚ್ಚು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸ್ಫೋಟಗೊಂಡಿದೆ. ಕುಮಾರಸ್ವಾಮಿ ಅವರು ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ ಎಂದು ಲೇವಡಿ ಮಾಡಿದ್ದ ಸಚಿವ ಹೆಚ್ ಸಿ ಬಾಲಕೃಷ್ಣ ಅವರಿಗೆ ಜೆಡಿಎಸ್ ಅತ್ಯಂತ ಕಟುವಾದ ಪದಗಳಲ್ಲಿ ಪ್ರತ್ಯುತ್ತರ ನೀಡಿದೆ. ಕುಮಾರಸ್ವಾಮಿ ಅವರು ಗೆಣಸು ಕೆತ್ತುತ್ತಿಲ್ಲ, ಬದಲಿಗೆ ನಿಮ್ಮ ನಾಯಕರ ಭ್ರಷ್ಟಾಚಾರದ ಬೇರುಗಳನ್ನೇ ಕೆತ್ತುತ್ತಿದ್ದಾರೆ ಎಂದು ಗುಡುಗಿರುವ ಜೆಡಿಎಸ್, ಸಚಿವ ಬಾಲಕೃಷ್ಣ ಅವರನ್ನು ಬಚ್ಚಲುಬಾಯಿ ಎಂದು ಸಂಬೋಧಿಸಿ ಆಕ್ರೋಶ ಹೊರಹಾಕಿದೆ.
ಹಳೆಯ ಇತಿಹಾಸ ಮರೆತ ಬಾಲಕೃಷ್ಣ ಅವರ ಸ್ವಾಮಿನಿಷ್ಠೆಗೆ ಆಸ್ಕರ್ ಕೊಡಬೇಕು
ಸಚಿವ ಬಾಲಕೃಷ್ಣ ಅವರು ಹೊಸ ಯಜಮಾನರನ್ನು ಮೆಚ್ಚಿಸಲು ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಟೀಕಿಸಿರುವ ಜೆಡಿಎಸ್, 2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನೈಸ್ ಅಕ್ರಮಕ್ಕೆ ತಡೆ ಹಾಕಿದ್ದನ್ನು ನೆನಪಿಸಿದೆ. ಆಗ ಇದೇ ಬಾಲಕೃಷ್ಣ ಅವರು ಕುಮಾರಸ್ವಾಮಿ ಅವರ ಜೊತೆಯಲ್ಲೇ ಇದ್ದರು. ಈಗ ಪಕ್ಷ ಬದಲಾದ ತಕ್ಷಣ ಎಲ್ಲವೂ ಮರೆತುಹೋಯಿತೇ? 2002ರಲ್ಲಿ ಡಿ ಕೆ ಶಿವಕುಮಾರ್ ಅವರು ಮಾಡಿಕೊಂಡಿದ್ದ ತ್ರಿಪಕ್ಷೀಯ ಒಪ್ಪಂದವೇ ಇಂದಿನ ಎಲ್ಲಾ ಅನಾಹುತಗಳಿಗೆ ಮೂಲ ಕಾರಣ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ನೂರಾರು ಕೋಟಿ ಅಕ್ರಮದ ವಿರುದ್ಧ ಧ್ವನಿ ಎತ್ತಿದರೆ ಅದನ್ನು ಲೇವಡಿ ಮಾಡುತ್ತಿರುವ ಬಾಲಕೃಷ್ಣ ಅವರ ಸ್ವಾಮಿನಿಷ್ಠೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದೆ.
ಸಂವಿಧಾನಕ್ಕೆ ವಂಚನೆ ಮಾಡಿದ ಭ್ರಷ್ಟರ ಬೂಟು ಪಾಲಿಶ್ ಮಾಡಬೇಡಿ
ನೈಸ್ ಯೋಜನೆಯ ವ್ಯವಹಾರವು ಸಂವಿಧಾನ ಮತ್ತು ಕಾನೂನಿನ ಮೇಲಿನ ವಂಚನೆ ಎಂದು ಹೈಕೋರ್ಟ್ ವಿಭಾಗೀಯ ಪೀಠವೇ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಸರ್ಕಾರದ ಅನುಮತಿ ಇಲ್ಲದೆ ಟೋಲ್ ವಸೂಲಿ ಮಾಡುತ್ತಿರುವುದು ಅಕ್ರಮ ಎಂದು ಕೋರ್ಟ್ ಹೇಳಿದ್ದರೂ, ಕುಮಾರಸ್ವಾಮಿ ಅವರನ್ನು ರಸ್ತೆ ಮೇಲೆ ಮಲಗಿಕೊಳ್ಳಲಿ ಎಂದು ದರ್ಪದಿಂದ ಮಾತನಾಡುವುದು ಆಡಳಿತ ಪಕ್ಷದ ಅಹಂಕಾರದ ಪರಮಾವಧಿ ಎಂದು ಜೆಡಿಎಸ್ ಕಿಡಿಕಾರಿದೆ. ಭ್ರಷ್ಟರ ಬೂಟು ಪಾಲಿಶ್ ಮಾಡುವ ಕೆಲಸ ಬಿಟ್ಟು, ಮೊದಲು ರೈತರ ಕಷ್ಟ ನೋಡಿ ಎಂದು ಸಲಹೆ ನೀಡಿದೆ.
ಮೂರು ಕೋಟಿ ಟೋಲ್ ಹಣದ ಮೇಲೆ ಹಾಯಾಗಿ ನಿದ್ದೆ ಮಾಡುವವರಿಗೆ ರೈತರ ನೋವು ಅರ್ಥವಾಗಲ್ಲ
ಕಳೆದ 30 ವರ್ಷಗಳಿಂದ ಸಾವಿರಾರು ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅನ್ನದಾತರ ಈ ಕಣ್ಣೀರು ಕಂಡು ಕುಮಾರಸ್ವಾಮಿ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ. ಆದರೆ ದಿನಕ್ಕೆ 3 ಕೋಟಿ ರೂಪಾಯಿಗಳ ಟೋಲ್ ಹಣದ ಲಾಭ ಪಡೆಯುತ್ತಿರುವ ನಾಯಕರಿಗೆ ಬಡವರ ನೋವು ಅರ್ಥವಾಗಲು ಸಾಧ್ಯವೇ ಇಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ. ತಾವು ಬೆಳೆದ ಪಕ್ಷಕ್ಕೆ ದ್ರೋಹ ಬಗೆದು ಹೋದವರು ಈಗ ತಮ್ಮ ಹೊಸ ನಾಯಕರ ಅಕ್ರಮಗಳನ್ನು ಮುಚ್ಚಿ ಹಾಕಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಸದನ ಸಮಿತಿ ವರದಿಯೇ ನೈಸ್ ಮುಖವಾಡ ಕಳಚಿದೆ
2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ರಚನೆಯಾಗಿದ್ದ ಸದನ ಸಮಿತಿಯು ನೈಸ್ ಯೋಜನೆಯಲ್ಲಿನ ಕರಾಳ ಸತ್ಯಗಳನ್ನು ಬಯಲಿಗೆಳೆದಿತ್ತು. ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಹೇಳಿದ್ದರೂ ಈಗಿನ ಕಾಂಗ್ರೆಸ್ ಸರ್ಕಾರ ಮೌನವಾಗಿರುವುದು ಯಾಕೆ? ನೈಸ್ ಸಂಸ್ಥೆಯ ಅಕ್ರಮದ ವಿರುದ್ಧ ಜೆಡಿಎಸ್ ಹೋರಾಟ ನಿಲ್ಲಿಸುವುದಿಲ್ಲ. ಗುಡ್ಡ ಅಗೆದರೆ ಇಲಿ ಅಲ್ಲ, ನಿಮ್ಮ ಅಕ್ರಮಗಳ ಬೃಹತ್ ಅರಮನೆಯೇ ಕುಸಿದು ಬೀಳಲಿದೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.





