ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
35 ವರ್ಷದ ಸರಿತಾ ಪತಿಯಿಂದಲೇ ಹತ್ಯೆಯಾಗಿರುವ ದುರ್ದೈವಿ. ತಾರಾನಾಥ್ ಕೊಲೆ ಮಾಡಿರುವ ವ್ಯಕ್ತಿ ಎನ್ನಲಾಗಿದೆ. ಈ ದಂಪತಿ ಮೂಲತಃ ಮಂಗಳೂರಿನವರು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದರು.
ಪತ್ನಿ ಸರಿತಾ ಮೇಲೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣವೊಂದು ದಾಖಲಾಗಿತ್ತು. ಹೀಗಾಗಿ ಜನರು ಕಳ್ಳಿ ಕಳ್ಳಿ ಎಂದು ಕರೆಯುತ್ತಿದ್ದರು. ಇದನ್ನು ಸಹಿಸಲು ಆಗದೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತ್ನಿಯನ್ನು ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ತಾರಾನಾಥ ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೆ ಪೊಲೀಸರಿಗೆ ಶರಣಾಗಿದ್ದಾರೆ. ಸದ್ಯ ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








