ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಪರಿಣಾಮ ಜಿಲ್ಲಾದ್ಯಂತ 120ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದರೆ, ಎರಡು ಮನೆಗಳು ಸಂಪೂರ್ಣ ನೆಲಸಮವಾಗಿದೆ. ಜೊತೆಗೆ ಮಲೆನಾಡು ಭಾಗದಲ್ಲಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ.
ವಿದ್ಯುತ್ ಕಂಬಗಳು ಧರೆಗುರುಳಿರುವ ಪರಿಣಾಮ ಮಲೆನಾಡಿನ ನೂರಾರು ಗ್ರಾಮಗಳ ಜನರು ಕಗ್ಗತ್ತಲಲ್ಲಿ ಬದುಕುವಂತಾಗಿದೆ. ಇನ್ನು ಕಂಬಗಳು ರಸ್ತೆಯಲ್ಲಿ ಮುರಿದು ಬಿದ್ದಿದ್ದು, ತಂತಿಗಳು ರಸ್ತೆ ತುಂಬಾ ಹರಡಿಕೊಂಡಿವೆ.
ಸರ್ಕಾರ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಮಳೆ ಮಲೆನಾಡಿಗರ ಜನಜೀವನವನ್ನ ಅಸ್ತವ್ಯಸ್ತ ಮಾಡಿದೆ.








