ಯಾದಗಿರಿ: ಜೂನ್ ಎರಡನೇ ವಾರ ಮುಗಿಯುತ್ತ ಬಂದರೂ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಆದರೆ, ಜಿಲ್ಲೆಯಲ್ಲಿ ಇಂದು ವ್ಯಾಪಕ ಮಳೆಯಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸುರಪುರ, ಹುಣಸಗಿ, ಶಹಾಪುರ ಸೇರಿದಂತೆ ಹಲವೆಡೆ ವ್ಯಾಪಕ ಮಳೆಯಾಗಿದೆ. ಗಾಳಿಯೊಂದಿಗೆ ಭರ್ಜರಿ ಮಳೆಯಾಗಿದೆ. ಭಾರೀ ಮಳೆ (heavy rain) ಹಾಗೂ ಬಿರುಗಾಳಿಗೆ ಶತಮಾನಕ್ಕೂ ಹಳೆಯ ಮರವೊಂದು ಉರುಳಿ ಬಿದ್ದಿದೆ. ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಬೈಕ್ ಗಳು ಜಖಂ ಗೊಂಡಿವೆ.
ಮನೆಗಳ ಮೇಲಿನ ತಾಡಪತ್ರಿ, ಹಂಚುಗಳು, ಶೀಟ್ ಗಳು ಕೂಡ ಹಲವೆಡೆ ಹಾರಿ ಹೋಗಿವೆ. ಬಿರುಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಆಗಿದೆ ಎನ್ನುವುದು ಒಂದು ಕಡೆ ಆದರೆ, ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.