ನವದೆಹಲಿ: ಎಸ್ಸಿ, ಎಸ್ಟಿಗೆ ನೀಡಲಾಗಿರುವ ಮೀಸಲಾತಿ (SC, ST for reservation) ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ (Supreme Court ) ಒಪ್ಪಿಗೆ ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಒಳ ಮೀಸಲಾತಿ (Sub-Classification) ಕಾನೂನು ಬದ್ಧ ಎಂದು ಕೂಡ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ಕೋರ್ಟ್ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಮುಖ್ಯ ನ್ಯಾಯಮೂತ್ರಿ ಚಂದ್ರಚೂಡ್ ನೇತೃತ್ವದ ನ್ಯಾ. ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠ, ಈ ಐತಿಹಾಸಿಕ ಆದೇಶ ಪ್ರಕಟಿಸಿದೆ.
ಒಳ ಮೀಸಲಾತಿ ಸಂಬಂಧ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ಪ್ರಕಟಿಸಿದೆ. ಈ ಮೂಲಕ ಪಂಜಾಬ್, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಅಂತಹ ಉಪ-ವರ್ಗೀಕರಣವನ್ನು ಒದಗಿಸುವ ಕಾನೂನುಗಳ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಪರಿಶಿಷ್ಟ ಜಾತಿಗಳು ಏಕರೂಪದ ಗುಂಪಲ್ಲ. ಎಸ್ಸಿಗಳಲ್ಲಿ ಹೆಚ್ಚು ತಾರತಮ್ಯ ಅನುಭವಿಸಿದವರಿಗೆ ಶೇ. 15ರಷ್ಟು ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶ ನೀಡಲು ಸರ್ಕಾರಗಳು ಅವರನ್ನು ಉಪವರ್ಗೀಕರಿಸಬಹುದು. ಉಪ-ವರ್ಗೀಕರಣವು ಅವರ ತಾರತಮ್ಯದ ಮಟ್ಟವನ್ನು ಆಧರಿಸಿರಬೇಕು. ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯದ ಕುರಿತು ಪ್ರಾಯೋಗಿಕ ಡೇಟಾ ಸಂಗ್ರಹಿಸುವ ಕಾರ್ಯವನ್ನು ರಾಜ್ಯಗಳು ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ಎಸ್ಸಿ, ಎಸ್ಟಿಗಳಲ್ಲಿಯೇ ಅವಕಾಶ ವಂಚಿತರಿಗೆ ಇನ್ನು ಮುಂದೆ ಅವಕಾಶ ಸಿಗಲಿವೆ.








