ಮಹಿಳಾ ಮೀಸಲಾತಿ ಮಸೂದೆ(Women’s Reservation Bill)ಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ ರಾಜ್ಯಸಭೆಯಲ್ಲಿ ಕೂಡ ಮಂಡನೆಯಾಗಲಿದೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ನೀಡುವ ನಾರಿ ಶಕ್ತಿ ವಂದನ್ ಮಸೂದೆ ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿದೆ. ಬಹುತೇಕ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದು, ವಿಧೇಯಕದ ಪರವಾಗಿ 454 ಸಂಸದರು ಮತ ಚಲಾಯಿಸಿದ್ದಾರೆ. ಕೇವಲ ಇಬ್ಬರು ಮಾತ್ರ ಇದಕ್ಕೆ ವಿರೋಧಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲದ ಅಗತ್ಯವಿತ್ತು. ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ನಾರಿ ಶಂಕ್ತಿವಂದನ್ ವಿಧೇಯಕವನ್ನು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಲಿದೆ. ಈ ಮಸೂದೆಯ ಮೂಲಕ ಸಂವಿಧಾನದ 330 ಹಾಗೂ 332ನೇ ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ 543 ಸ್ಥಾನಗಳ ಪೈಕಿ 181 ಸ್ಥಾನಗಳನ್ನು ಮತ್ತು ರಾಜ್ಯ ವಿಧಾನಸಭೆಗಳಲ್ಲಿ 4,109 ಸ್ಥಾನಗಳ ಪೈಕಿ 1370 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ರಾಜ್ಯ ಸಭೆಯಲ್ಲಿ ಕೂಡ ಈ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.