ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದು ಚೀನಾದ ಮೇಲಿನ ಆಕ್ರೋಶ ವ್ಯಕ್ತಪಡಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ
ರಾಯಚೂರು, ಜೂನ್ 23: ಭಾರತ ಹಾಗೂ ಚೀನಾದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಚೀನಾದ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶದ 20 ಜನ ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ದೇಶದ ಜನರು ಚೀನಾದ ಮೇಲೆ ಆಕ್ರೋಶದಿಂದ ಕುದಿಯುತ್ತಿದ್ದು, ಬಹುತೇಕರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ತಮ್ಮ ರೋಷವನ್ನು ಹೊರಹಾಕಿದ್ದಾರೆ.
ಚೀನಾದ ಮೇಲೆ ಪ್ರತಿಕಾರ ತೀರಿಸಲು ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ಸೇನೆಯಲ್ಲಿ ತಮಗೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೃಹ ರಕ್ಷಕ ದಳದ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಇವರು ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದಿದ್ದು, ನನ್ನ ದೇಶ ನನ್ನ ಭಾರತ
ಈ ಭಾರತ ದೇಶಕ್ಕಾಗಿ ನನ್ನ ಜೀವ
ಭಾರತ ಮತ್ತು ಚೀನಾದ ನಡುವೆ ಗಾಲ್ವಾನ್ ಪ್ರದೇಶದಲ್ಲಿ ಚೀನಾ ದೇಶದ ಸೈನಿಕರು ನನ್ನ ದೇಶದ ಗಡಿಯನ್ನು ಕ್ರೂರ ಬುದ್ಧಿಯಿಂದ ದೇಶದ ಸೈನಿಕರ ಮೇಲೆ ಹಲ್ಲೆ ಮಾಡಿ ಸೈನಿಕರನ್ನು ಕೊಲೆಗೈದಿದ್ದು, ಈ ವಿಷಯವು ನನ್ನ ಗಮನಕ್ಕೆ ಬಂದಾಗಿನಿಂದ ಸರಿಯಾಗಿ ನಿದ್ರೆ ಬರುತ್ತಿಲ್ಲ, ಆದ ಕಾರಣ ನನ್ನ ರಕ್ತವು ದೇಶಕ್ಕಾಗಿ ಕುದಿಯುತ್ತಿದ್ದು ಚೀನಿಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳು ನನಗೆ ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ
ಎಂದು ಬರೆದು ಮನವಿ ಮಾಡಿಕೊಂಡಿದ್ದಾರೆ.