ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಲಂಚಗುಳಿತನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಆರೋಪ ಸಾಬೀತಾದರೆ ಅಂತಹ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇರವಾಗಿ ಸೇವೆಯಿಂದಲೇ ವಜಾಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಗಳನ್ನು ಕಳೆದುಕೊಂಡ ತಂದೆಯೊಬ್ಬರಿಂದ ಮರಣೋತ್ತರ ಪರೀಕ್ಷೆಗೆ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದೆ ಎಂದು ಪುನರುಚ್ಚರಿಸಿದರು.
ಪ್ರಕರಣದ ಹಿನ್ನೆಲೆ ಮತ್ತು ಸರ್ಕಾರದ ಕ್ರಮ
ಇತ್ತೀಚೆಗೆ ಬೆಂಗಳೂರಿನ ಕೆ. ಶಿವಕುಮಾರ್ ಎಂಬುವವರು ತಮ್ಮ ಮಗಳ ಅಕಾಲಿಕ ಮರಣದ ನಂತರ, ಮರಣೋತ್ತರ ಪರೀಕ್ಷೆ ಹಾಗೂ ಇತರೆ ಪ್ರಕ್ರಿಯೆಗಳಿಗಾಗಿ ಪೊಲೀಸರು ಹೇಗೆ ಲಂಚಕ್ಕೆ ಪೀಡಿಸಿದರು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಇಲಾಖೆ, ತಕ್ಷಣವೇ ಬೆಳ್ಳಂದೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಿತ್ತು.
ಈ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಪರಮೇಶ್ವರ್, “ನೊಂದವರ ಬಳಿ ಲಂಚ ವಸೂಲಿ ಮಾಡುವಂತಹ ಅಮಾನವೀಯ ಘಟನೆಗಳು ಅತ್ಯಂತ ಖಂಡನೀಯ. ಕೇವಲ ಪೊಲೀಸ್ ಇಲಾಖೆಯಷ್ಟೇ ಅಲ್ಲ, ಸರ್ಕಾರದ ಯಾವುದೇ ಇಲಾಖೆಯಲ್ಲಿ ಲಂಚ ಪಡೆದರೂ ಕಠಿಣ ಕ್ರಮ ನಿಶ್ಚಿತ. ಲಂಚದ ಮೊತ್ತ ಸಾವಿರವಿರಲಿ, ಐನೂರೇ ಇರಲಿ, ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸುತ್ತೇವೆ. ವಿಚಾರಣೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ, ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರಕ್ಕೆ ಬೆಂಬಲವಿಲ್ಲ
“ಪೊಲೀಸ್ ಸಮಾವೇಶ ಸೇರಿದಂತೆ ಹಲವು ಸಭೆಗಳಲ್ಲಿ ನಾನು ಮತ್ತು ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದೇವೆ. ಭ್ರಷ್ಟಾಚಾರವನ್ನು ಯಾವುದೇ ಹಂತದಲ್ಲಿಯೂ ನಾವು ಬೆಂಬಲಿಸುವುದಿಲ್ಲ. ಸಾರ್ವಜನಿಕರು ಇಂತಹ ಪ್ರಕರಣಗಳು ನಡೆದಾಗ ಧೈರ್ಯದಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು,” ಎಂದು ಸಚಿವರು ಮನವಿ ಮಾಡಿದರು.
ಒಳ ಮೀಸಲಾತಿ ಗೊಂದಲಕ್ಕೆ ತೆರೆ
ಒಳ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, “ಹಿಂದಿನ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ದೊಡ್ಡ ಗೊಂದಲ ಸೃಷ್ಟಿಸಿತ್ತು. ನಾವು ಅದನ್ನು ಸರಿಪಡಿಸಿ, ಕಾನೂನಿನ ಬಲ ನೀಡಲು ಮುಂದಾಗಿದ್ದೇವೆ. ಸದಾಶಿವ ಆಯೋಗದ ವರದಿಯನ್ವಯ ಎ, ಬಿ, ಸಿ, ಡಿ ಎಂದು ವರ್ಗೀಕರಣ ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಬದಲು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಾನೂನು ರೂಪಿಸಿ ಮಂಡಿಸಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ,” ಎಂದರು. ಸಂಸದ ಗೋವಿಂದ ಕಾರಜೋಳ ಅವರಿಗೆ ಈ ವಿಷಯದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ ಎಂದು ಅವರು ಟೀಕಿಸಿದರು.
ಧರ್ಮಸ್ಥಳ ಪ್ರಕರಣ: ಮುಂದಿನ ನಡೆ ಬಗ್ಗೆ ಚರ್ಚೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಎಸ್‌ಐಟಿ ತನಿಖೆಗೆ ಹೈಕೋರ್ಟ್ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ನ್ಯಾಯಾಲಯದ ಆದೇಶದ ಪ್ರತಿಯನ್ನು ನಾನು ಇನ್ನೂ ನೋಡಿಲ್ಲ. ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕೇ ಎಂಬುದನ್ನು ತೀರ್ಮಾನಿಸುತ್ತೇವೆ. ಎಸ್‌ಐಟಿ ತಂಡ ತನ್ನ ತನಿಖಾ ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸುವ ನಿರೀಕ್ಷೆಯಿದೆ,” ಎಂದು ತಿಳಿಸಿದರು.
ಮಧ್ಯರಾತ್ರಿ ಸಭೆ ವದಂತಿಗೆ ತೆರೆ
ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ ಎನ್ನಲಾದ ‘ಮಿಡ್‌ನೈಟ್ ಮೀಟಿಂಗ್’ ಕುರಿತ ವದಂತಿಗಳನ್ನು ತಳ್ಳಿಹಾಕಿದ ಅವರು, “ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಅಂತರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಲು ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ,” ಎಂದು ಸ್ಪಷ್ಟನೆ ನೀಡಿದರು.








