ಚೆನ್ನೈ : ಭರ್ಜರಿ ಪ್ರದರ್ಶನ ತೋರಿದ ಮುಂಬಯಿ ಇಂಡಿಯನ್ಸ್ ನಿನ್ನೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಆಕಾಶ್ ಮಧ್ವಾಲ್ ಮಾರಕ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬಯಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎಲಿಮಿನೇಟರ್ 2ನೇ ಹಂತಕ್ಕೆ ತಲುಪಿದೆ. ಮೇ 26 ರಂದು ನಡೆಯಲಿರುವ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ಸೋತು ನಿರಾಸೆ ಅನುಭವಿಸಿದೆ.
ಕಳೆದ ವರ್ಷ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 2ನೇ ಬಾರಿಯೂ ಮೊದಲ ಎಲಿಮಿನೇಟರ್ ಪಂದ್ಯದಲ್ಲಿಯೇ ಸೋತು ಹೊರನಡೆದಿದೆ. 2022ರ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬಯಿ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ 16.3 ಓವರ್ಗಳಲ್ಲೇ 101 ರನ್ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಸೂಪರ್ ಜೈಂಟ್ಸ್ ತಂಡದಲ್ಲಿ ಮುಂಬಯಿ ಬೌಲರ್ ಗಳ ದಾಳಿಗೆ ತರಗೆಲೆಗಳಂತೆ ವಿಕೆಟ್ ಉದುರಿದವು. ಪವರ್ ಪ್ಲೇ ನಲ್ಲಿ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಉತ್ತಮ ರನ್ ಕಲೆಹಾಕಿತ್ತು. ಬಳಿಕ ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳ ಕಳಪೆ ಪ್ರದರ್ಶನದಿಂದ ಮುಂಬೈ ಎದುರು ಮಂಡಿಯೂರಬೇಕಾಯಿತು.
ಲಕ್ನೋ ತಂಡದ ಪರ ಮಾರ್ಕಸ್ ಸಗ್ಟೋಯ್ನಿಸ್ 40 ರನ್, ಕೈಲ್ ಮೇಯರ್ಸ್ 18 ರನ್, ದೀಪಕ್ ಹೂಡಾ 15 ರನ್ ಗಲಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕ್ರೀಸ್ನಲ್ಲಿ ದೃಢವಾಗಿ ನಿಲ್ಲದ ಕಾರಣ ಲಕ್ನೋ ಹೀನಾಯ ಸೋಲನುಭವಿಸಿತು. ಮುಂಬಯಿ ಪರ ಆಕಾಶ್ ಮಧ್ವಾಲ್ 3.3 ಓವರ್ ಗಳಲ್ಲಿ 5 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದರು. ಕೇಪ್ಟೌನ್ನಲ್ಲಿ ನಡೆದ 2009ರ ಐಪಿಎಲ್ ಆವೃತ್ತಿಯಲ್ಲಿ ಕುಂಬ್ಳೆ 3.1 ಓವರ್ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಆಕಾಶ್ ಮಧ್ವಾಲ್ 3.3 ಓವರ್ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಚಿರ್ಸ್ ಜೋರ್ಡನ್ ಹಾಗೂ ಪಿಯೂಷ್ ಚಾವ್ಲಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.