ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಅಖಾಡಕ್ಕಿಳಿಯಲು ಕೈ ಪಡೆ ಸಿದ್ದತೆ

ಬೆಂಗಳೂರು : ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯ, ಭೂ ಸುಧಾರಣಾ ಕಾಯ್ದೆಯ ಪ್ರತಿಕೂಲ ಪರಿಣಾಮಗಳು, ಪಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ  ಆಗಿರುವ‌ ತೊಂದರೆ, ಪಂಚಾಯತ್ ರಾಜ್ ಚುನಾವಣೆ ಬಗ್ಗೆ  ಚರ್ಚಿಸಲು ಇಂದು ಕೈ ನಾಯಕರು ಸಭೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ನೇತೃತ್ವದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ವಿರೋಧ ಪಕ್ಷದ ‌ನಾಯಕ ‌ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ‌ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷ ‌ಸಲೀಂ ಅಹ್ಮದ್, ಈಶ್ವರ್‌ಖಂಡ್ರೆ, ಹಿರಿಯ ನಾಯಕ ವೀರಪ್ಪ ಮೊಯ್ಲಿ, ರೆಹಮಾನ್ ಖಾನ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದಪ್ಪ ಚರ್ಮದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಕ್ಷದ ವತಿಯಿಂದ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಅತ್ಯಂತ ದುಬಾರಿಯಾಗಿದೆ. ಬೆಲೆ ಏರಿಕೆಯನ್ನು ಖಂಡಿಸುವುದರ ಜೊತೆಗೆ ಜನಪರ ಹೋರಾಟ ಕೈಗೆತ್ತಿಕೊಳ್ಳಬೇಕು. ಕಳೆದ ಆರು ವರ್ಷಗಳಲ್ಲಿ ದರ ಏರಿಕೆ ಮತ್ತು ಡೀಸೆಲ್, ಪೆಟ್ರೋಲ್ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರ ಸುಮಾರು 18 ಲಕ್ಷ ಕೋಟಿ ಸಂಗ್ರಹ ಮಾಡಿರುವ ಮಾಹಿತಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿರುವುದರಿಂದ ಪೆಟ್ರೋಲ್, ಡೀಸೆಲ್ 25 ರೂ. ಆಸುಪಾಸಿನಲ್ಲಿ ಮಾರಾಟವಾಗಬೇಕಿತ್ತು.  ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡದೆ ಜನರಿಗೆ ಎರಡೂ ಸರ್ಕಾರಗಳು ದ್ರೋಹ ಮಾಡಿವೆ.

ದೇಶದ ಹಣಕಾಸು ಪರಿಸ್ಥಿತಿ‌ ಮೊದಲೇ ಚೆನ್ನಾಗಿರಲಿಲ್ಲ. ಇದೀಗ ಸರ್ಕಾರದ ವೈಫಲ್ಯದ ಪರಿಣಾಮ ಆರ್ಥಿಕ ಸ್ಥಿತಿಗೆ ಪಾರ್ಶ್ವವಾಯು ಬಡಿದಿದೆ ಎಂದು ಸಿದ್ದರಾಮಯ್ಯ  ಟೀಕಿಸಿದರು.

ಲಾಕ್ ಡೌನ್ ತೆಗೆದ ಬಳಿಕ ಕೊರೊನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ, ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ಸಿಬ್ಬಂದಿಗೆ ಸೌಲಭ್ಯಗಳೇ ಇಲ್ಲ.  ರೈತರು ಮತ್ತಿತರ ಸಮುದಾಯಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಈ ವರೆಗೆ ತಲುಪಿಲ್ಲ. ಲಾಕ್ ಡೌನ್ ಸಮಯದಲ್ಲೇ ಜನರ ಕೈಗೆ ಹಣ ಕೊಟ್ಟಿದ್ದರೆ ಅವರಿಗೆ ಈಗ ಕಷ್ಟ ಬರುತ್ತಿರಲಿಲ್ಲ.

ಕೊರೊನಾ ವಿಚಾರದಲ್ಲಿ ದೇಶದ ಸ್ಥಿತಿ ಕೆಟ್ಟದಾಗಿದೆ. ಮುಂದೆ ನಾವು ಅಮೆರಿಕ ಮೀರಿಸುವ ಪರಿಸ್ಥಿತಿ ಇದೆ. ಜಿಡಿಪಿಯಲ್ಲಿ ಶೇ.1ರಷ್ಟನ್ನೂ‌ ಸರ್ಕಾರ ಸೋಂಕು ನಿಯಂತ್ರಣಕ್ಕೆ ಖರ್ಚು ಮಾಡಿಲ್ಲ.  ಎಪಿಎಂಸಿ ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ಆದರೂ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಗುಲಾಮನಂತೆ ವರ್ತಿಸುತ್ತಿದೆ. ತಿದ್ದುಪಡಿ ಆರಂಭದಲ್ಲಿ ಚೆನ್ನಾಗಿ ಕಂಡರೂ ಮುಂದಿನ ದಿನಗಳಲ್ಲಿ ರೈತರು ಬೀದಿ ಪಾಲಾಗುತ್ತಾರೆ.

ಭೂ ಸುಧಾರಣೆ ಕಾಯಿದೆಗೂ ತಿದ್ದುಪಡಿ ತರಲಾಗುತ್ತಿದೆ.‌ ಉಳುವವನಿಗೇ ಭೂಮಿ ಕೊಡಬೇಕು. ಬಡವರಿಗೆ ಭೂಮಿ ಹಂಚಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು. ಇದನ್ನೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಉದ್ದೇಶಿತ ತಿದ್ದುಪಡಿ ಪ್ರಕಾರ ಯಾರು ಬೇಕಾದರೂ ಕೃಷಿ ಭೂಮಿ‌ ಖರೀದಿಸಬಹುದು. ನಾವು ಉಳ್ಳವರಿಗೆ ಭೂಮಿ ಕೊಟ್ಟರೆ, ಸರ್ಕಾರ ಉಳ್ಳವರಿಗೆ ಕೃಷಿ ಭೂಮಿ ಧಾರೆ ಎರೆಯಲು ಮುಂದಾಗಿದೆ. ಇದರ ವಿರುದ್ಧವೂ ತೀವ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಜೈಲ್ ಭರೋ ಸೇರಿದಂತೆ ನಾನಾ ರೀತಿಯ ಹೋರಾಟಗಳನ್ನು ರೂಪಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This