ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡ ಗೆಲುವು ಸಾಧಿಸುವುದರ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ನಾಲ್ಕನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆಲ್ಲುವುದರ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತ ತಂಡವು ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ತಂಡವು ಎರಡನೇ ಸ್ಥಾನದಲ್ಲಿದೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಇದೇ ಸ್ಥಾನದಲ್ಲಿತ್ತು. ಆಂಗ್ಲರನ್ನು ಮಣಿಸಿ ಸರಣಿ ಗೆದ್ದಿರುವ ತಂಡ ತನ್ನ ಜಾಗ ಭದ್ರಪಡಿಸಿಕೊಂಡಿದೆ. ಈ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಸ್ಥಾನದಲ್ಲಿದ್ದು, ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಕಿವೀಸ್ ಪಡೆ ಶೇ. 75 ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ಮೊದಲ ಸ್ಥಾನದಲ್ಲಿದೆ.
ನಾಲ್ಕನೇ ಟೆಸ್ಟ್ ಗೆದ್ದಿರುವ ಭಾರತ ತಂಡವು 8 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು, 2ರಲ್ಲಿ ಸೋತಿದೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಮೂಲಕ ತಂಡದ ಗೆಲುವಿನ ಲೆಕ್ಕಾಚಾರ ಶೇಕಡಾವಾರು 64.58ಕ್ಕೆ ಏರಿಕೆಯಾಗಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಆಡಿರುವ 10 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿದ್ದು, 3ರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಗೆಲುವಿನ ಶೇಕಡಾವಾರು 55 ಆಗಿದೆ. ಅಂದರೆ ಪಿಸಿಟಿ ವಿಷಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕಿಂತ ಭಾರೀ ಮುಂದಿದೆ. ಬಾಂಗ್ಲಾದೇಶ ತಂಡ 4ನೇ ಸ್ಥಾನದಲ್ಲಿ ಶೇಕಡಾವಾರು 50 ಹೊಂದಿದೆ. 5ನೇ ಸ್ಥಾನದಲ್ಲಿರುವ ಪಾಕಿಸ್ತಾನ 5 ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಅದರ ಗೆಲುವಿನ ಶೇಕಡಾವಾರು 36.66 ಆಗಿದೆ.
ವೆಸ್ಟ್ ಇಂಡೀಸ್ ಕೂಡ 36.66 ಗೆಲುವಿನ ಶೇಕಡಾವಾರು ಹೊಂದಿದ್ದು, ಆರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 25 ಗೆಲುವಿನ ಶೇಕಡಾವಾರುವಿನೊಂದಿಗೆ ಏಳನೇ ಸ್ಥಾನದಲ್ಲಿದೆ. ಆದರೆ, ಭಾರತದ ವಿರುದ್ಧ ಹೀನಾಯವಾಗಿ ಸೋತಿರುವ ಇಂಗ್ಲೆಂಡ್ ತಂಡ್ ಆಡಿರುವ 8 ಪಂದ್ಯಗಳ್ಲಲಿ 3 ಪಂದ್ಯ ಗೆದ್ದು 8ನೇ ಸ್ಥಾನದಲ್ಲಿದೆ.