ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಇತ್ತೀಚಿನ ನಿರ್ಧಾರಗಳು ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ರಸ್ತೆಗಳಲ್ಲಿ ಗೋವುಗಳ ಕುರ್ಬಾನಿ ನಿಷೇಧ ಮತ್ತು ಮದರಸಾಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿರುವ ಕ್ರಮದ ವಿರುದ್ಧ ಎಜೆಯುಪಿ ಮುಖ್ಯಸ್ಥ ಹಾಗೂ ಶಾಸಕ ಹುಮಾಯೂನ್ ಕಬೀರ್ ಕಿಡಿಕಾರಿದ್ದಾರೆ. ಸರ್ಕಾರದ ಈ ನಡೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಬೆಂಕಿಯೊಂದಿಗೆ ಸರಸವಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಬೀರ್, ಧಾರ್ಮಿಕ ಆಚರಣೆಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ. ಈದ್ ಸಂದರ್ಭದಲ್ಲಿ ನಡೆಯುವ ಪ್ರಾಣಿ ಬಲಿ ಅಥವಾ ಕುರ್ಬಾನಿ ಪ್ರಕ್ರಿಯೆಯು ಯಾವುದೇ ನಿರ್ಬಂಧಗಳಿಗೂ ಮಣಿಯದೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಜಾನುವಾರು ಹತ್ಯೆಯ ಮಾರ್ಗಸೂಚಿಗಳಿಗೂ ಮತ್ತು ಈದ್ ಹಬ್ಬದ ಆಚರಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆಯೇ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಈಗ ಹೊಸ ನಿಯಮಗಳನ್ನು ಹೇರುವುದು ಸರಿಯಲ್ಲ ಎಂದು ಅವರು ಸವಾಲು ಹಾಕಿದ್ದಾರೆ.
ಮೇ 28 ರಂದು ಆಚರಿಸಲಾಗುವ ಈದ್ ಹಬ್ಬಕ್ಕೂ ಮುನ್ನ ರಾಜ್ಯ ಸರ್ಕಾರವು ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿವೆ. ಸರ್ಕಾರದ ಹೊಸ ನೋಟಿಸ್ ಪ್ರಕಾರ, ಯಾವುದೇ ಗೋವು ಅಥವಾ ಎಮ್ಮೆಯನ್ನು ವಧಿಸಬೇಕಾದರೆ ಅದು ಕನಿಷ್ಠ 14 ವರ್ಷ ಮೇಲ್ಪಟ್ಟಿರಬೇಕು. ಅಷ್ಟೇ ಅಲ್ಲದೆ, ಆ ಪ್ರಾಣಿಯು ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥವಾಗಿದೆ ಎಂಬ ಬಗ್ಗೆ ಅಧಿಕೃತವಾಗಿ ಲಿಖಿತ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ವೃದ್ಧಾಪ್ಯ, ಗಾಯ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ಶಾಶ್ವತವಾಗಿ ಅಂಗವಿಕಲಗೊಂಡಿರುವ ಪ್ರಾಣಿಗಳಿಗೆ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗುವುದು ಎಂಬ ಕಟ್ಟುನಿಟ್ಟಿನ ನಿಯಮವನ್ನು ಕಬೀರ್ ಬಲವಾಗಿ ವಿರೋಧಿಸಿದ್ದಾರೆ.
ಮದರಸಾಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿರುವುದು ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸುತ್ತಿರುವುದು ಸಮಾಜದಲ್ಲಿ ಅಶಾಂತಿ ಉಂಟುಮಾಡಬಹುದು ಎಂದು ಹುಮಾಯೂನ್ ಕಬೀರ್ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಇಂತಹ ಏಕಪಕ್ಷೀಯ ನಿರ್ಧಾರಗಳು ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತರುತ್ತಿವೆ. ಕೂಡಲೇ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಈ ವಿವಾದವು ಈಗ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.







