ಕಾರ್ಕಳ: ಶಾಲಾ ವಿದ್ಯಾರ್ಥಿಗಳ ಪವಿತ್ರ ಜನಿವಾರವನ್ನು ತೆಗೆಸಿದ ಆರೋಪದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಘಟನೆ ತಾಲೂಕಿನ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆಯ ಜೊತೆಗೆ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೋಷಕರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಈ ಕಠಿಣ ಕ್ರಮ ಕೈಗೊಂಡಿದೆ.
ಘಟನೆಯ ವಿವರ
ಮೂಲತಃ ಕಲಬುರಗಿ ನಿವಾಸಿಯಾಗಿರುವ ಮದರಶಾ ಎಸ್. ಮಕಾಂದರ್, ಕೆಲವೇ ತಿಂಗಳುಗಳ ಹಿಂದೆ ಶಾಲೆಯಲ್ಲಿ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ್ದರು. ಅಂದಿನಿಂದಲೂ ಅವರು ವಿದ್ಯಾರ್ಥಿಗಳೊಂದಿಗೆ ಕಠಿಣವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಮಕ್ಕಳಿಗೆ ಸಣ್ಣಪುಟ್ಟ ತಪ್ಪುಗಳಿಗೂ 200 ಬಸ್ಕಿ ಹೊಡೆಯುವಂತಹ ಕಠಿಣ ಶಿಕ್ಷೆ ವಿಧಿಸುತ್ತಿದ್ದರು. ಇತ್ತೀಚೆಗೆ, ಕೆಲವು ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಮತ್ತು ಕೈಗೆ ಕಟ್ಟಿದ್ದ ಧಾರ್ಮಿಕ ದಾರಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ. ಇದು ಮಕ್ಕಳಲ್ಲಿ ಭಯ ಮತ್ತು ಪೋಷಕರಲ್ಲಿ ಆತಂಕ ಮೂಡಿಸಿತ್ತು.
ಮಕ್ಕಳು ತಮ್ಮ ಪೋಷಕರ ಬಳಿ ಈ ವಿಷಯವನ್ನು ತಿಳಿಸಿದಾಗ, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯಿತು. ಶುಕ್ರವಾರ ಶಾಲೆಗೆ ಆಗಮಿಸಿದ ಪೋಷಕರು ಮತ್ತು ಸ್ಥಳೀಯರು ಶಿಕ್ಷಕ ಮಕಾಂದರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆಯೂ ಅನೇಕ ಬಾರಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಉಡಾಫೆ ಉತ್ತರ, ಹೆಚ್ಚಿದ ಆಕ್ರೋಶ
ಈ ಬಗ್ಗೆ ಶಿಕ್ಷಕ ಮಕಾಂದರ್ ಅವರನ್ನು ಪ್ರಶ್ನಿಸಿದಾಗ, “ಜನಿವಾರ ಎಂದರೇನು ಎಂಬುದೇ ನನಗೆ ತಿಳಿದಿಲ್ಲ” ಎಂದು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವರ ಈ ಬೇಜವಾಬ್ದಾರಿ ಉತ್ತರವು ಪೋಷಕರ ಮತ್ತು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.
“ಮಿಯ್ಯಾರಿನಲ್ಲಿ ನಾವು ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಅಣ್ಣತಮ್ಮಂದಿರಂತೆ ಬಾಳುತ್ತಿದ್ದೇವೆ. ಇಲ್ಲಿನ ಮೊರಾರ್ಜಿ ದೇಸಾಯಿ ಶಾಲೆ ಉತ್ತಮ ಫಲಿತಾಂಶದ ಮೂಲಕ ಹೆಸರು ಗಳಿಸಿದೆ. ಆದರೆ, ಇಂತಹ ಶಿಕ್ಷಕರ ವರ್ತನೆಯು ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಇಂತಹ ಘಟನೆಗಳು ಮರುಕಳಿಸಬಾರದು” ಎಂದು ಸ್ಥಳೀಯರು ಆಗ್ರಹಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಲೆಯ ಪ್ರಾಂಶುಪಾಲರು, ಪೋಷಕರ ಒತ್ತಾಯದ ಮೇರೆಗೆ ಶಿಕ್ಷಕ ಮದರಶಾ ಎಸ್. ಮಕಾಂದರ್‌ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಾಲಾ ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸುವುದರ ಮಹತ್ವವನ್ನು ಮತ್ತೊಮ್ಮೆ ಸಾರಿದೆ.







