ರಾಮನಗರ : ಕೊರೊನಾ ಲಾಕ್ ಡೌನ್ ನಿಂದ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾನೇ ಮುಖ್ಯಮಂತ್ರಿ ಆಗಿದ್ರೆ ಇವತ್ತು 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ನಾವು ಕೊಟ್ಟ ಸಲಹೆಯನ್ನ ಪರಿಗಣಿಸುತ್ತಿಲ್ಲ. ರೈತರ ವಿಚಾರದಲ್ಲಿ ಯಾರು ಟೀಕೆ ಮಾಡಬೇಡಿ. ನಾನು ರೈತರ ಕಷ್ಟದಲ್ಲಿ ನೆರವಿಗೆ ಬಂದು ಹಲವರಿಗೆ ಸಹಾಯ ಮಾಡಿದ್ದೇನೆ ಎಂದರು.
ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಮಣ್ಣಿನ ಮಕ್ಕಳು ಎಲ್ಲಿದ್ದಾರೆ ಎಂದಿದ್ದ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ ಡಿಕೆ, ಬಾಲಕೃಷ್ಣ ಅವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ. ಅವರು 20 ಸಾವಿರ ರೂಪಾಯಿಯ ತರಕಾರಿ ಖರೀದಿ ಮಾಡಿ ಪ್ರಚಾರ ಮಾಡುತ್ತಾರೆ. ನಾನು ರಾಮನಗರ – ಚನ್ನಪಟ್ಟಣ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ವೆಚ್ಚದ ಆಹಾರ ಸಾಮಗ್ರಿ ಕೊಡುತ್ತಿದ್ದೇನೆ. ಮಣ್ಣಿನ ಮಕ್ಕಳು ಅಂತಾ ನಾವು ಬಿರುದನ್ನು ಹಾಕಿಕೊಂಡಿಲ್ಲ. ನಾಡಿನ ಜನ ನಮಗೆ ಕೊಟ್ಟಿರುವ ಬಿರುದು ಎಂದು ಟಾಂಗ್ ನೀಡಿದರು.
ರಾಮನಗರ ಜೈಲಿಗೆ ಪಾದರಾಯನಪುರದ ವಿಚಾರಣಾಧೀನ ಖೈದಿಗಳು ಶಿಫ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ನಾನು ಈ ಬಗ್ಗೆ ಸಿಎಂ, ಗೃಹಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಈ ನಿರ್ಧಾರ ಮಾಡಿದ್ದೀರಿ, ಈ ಸಲಹೆ ಕೊಟ್ಟವರು ಯಾರು ಜನ ನನಗೆ ಫೋನ್ ಮಾಡಿ ಈ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಹೇಳಿದ್ದೇನೆ. ಬೆಂಗಳೂರಿನಲ್ಲೇ ಸರ್ಕಾರಿ ಹಾಸ್ಟೆಲ್ ನಲ್ಲಿ, ಆಸ್ಪತ್ರೆಗಳಲ್ಲಿ, ಕಲ್ಯಾಣಮಂಟಪದಲ್ಲಿ ಇರಿಸಬಹುದಿತ್ತು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಉದ್ಧಟತನ,ಅಧಿಕಾರದಲ್ಲಿದ್ರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ.ನಾನು ಸಾರ್ವಜನಿಕರಿಗೆ ಅನಾನುಕೂಲವಾಗಲು ಅವಕಾಶ ಕೊಡಲ್ಲ.ಸರ್ಕಾರದ ಹಲವು ಲೋಪಗಳಿವೆ ಆದರೂ ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.