ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಐಎಎಸ್ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಓಲ್ಡ್ ರಾಜಿಂದರ್ ನಗರ ಪ್ರದೇಶದ ರಾವು ಅವರ ಐಎಎಸ್ ತರಬೇತಿ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಈ ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ಇತ್ತು ಎನ್ನಲಾಗಿದೆ. ಹೀಗಾಗಿಯೇ ನೀರು ಹೊಕ್ಕು ಈ ದುರ್ಘಟನೆ ನಡೆದಿದೆ. ನೆಲಮಾಳಿಗೆಯು ಅತ್ಯಂತ ವೇಗವಾಗಿ ಜಲಾವೃತಗೊಂಡಿತು, ಇದರಿಂದಾಗಿ ಕೆಲವರು ಒಳಗೆ ಸಿಲುಕಿಕೊಂಡರು ಎಂದು ಡಿಸಿಪಿ ಹರ್ಷವರ್ಧನ್ ಹೇಳಿದ್ದಾರೆ.
ದೆಹಲಿ ಪೊಲೀಸರು, ಅಗ್ನಿಶಾಮಕ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಶೋಧ ಕಾರ್ಯಾಚರಣೆ ನಡೆಸಿದ ನಂತರ ಅವರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯು ನೆಲಮಾಳಿಗೆಯಲ್ಲಿ ಹಲವಾರು ವಿದ್ಯಾರ್ಥಿಗಳು ಇರುವ ಗ್ರಂಥಾಲಯವನ್ನು ಹೊಂದಿದೆ. ಹೀಗಾಗಿ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಹರ್ಷವರ್ಧನ್ ಹೇಳಿದ್ದಾರೆ.
ನೆಲಮಾಳಿಗೆಯು ಜಲಾವೃತಗೊಂಡ ನಂತರ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಹಗ್ಗಗಳನ್ನು ಬಳಸಲಾಗಿದೆ. ಕೋಚಿಂಗ್ ಸೆಂಟರ್‌ನಲ್ಲಿ ತೇಲುವ ಪೀಠೋಪಕರಣಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








