ಬೆಂಗಳೂರು: ನಾನು ಸ್ಪರ್ಧಿಸಿದರೆ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲವಾದರೆ ನನಗೆ ಚುನಾವಣೆಯೇ ಬೇಡ. ಈಗಲೂ ನನಗೆ ವಿಶ್ವಾಸವಿದೆ. ಬಿಜೆಪಿಯು ಮಂಡ್ಯ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡರು, ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳು ಆಗಮಿಸಿದ್ದರು. ಮುಂದೆ ಲೋಕಸಭೆ ಚುನಾವಣೆ ಬರುತ್ದೆ. ಹೀಗಾಗಿ ಗೆಲುವಿಗಾಗಿ ಚರ್ಚೆ ಮಾಡಲಾಗಿದೆ. ಸಿಟ್ಟಿಂಗ್ ಎಂಪಿ ಎನ್ನುವ ಸ್ಥಾನ ಇದ್ದೇ ಇರುತ್ತದೆ. ಸಿಟ್ಟಿಂಗ್ ಎಂಪಿಗೆ ಮೊದಲ ಪ್ರಾಶಸ್ತ್ಯ ಎಂಬುವುದು ಎಲ್ಲ ಪಕ್ಷದಲ್ಲಿ ಇದ್ದೇ ಇರುತ್ತದೆ. ಬಿಜೆಪಿಯನ್ನು ಮಂಡ್ಯದಲ್ಲಿ ಉಳಿಸಬೇಕು. ಎಂಪಿ ಸೀಟು ಉಳಿಸಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಹೇಳಿದರು.
ಅಧಿಕೃತವಾಗಿ ಬಿಜೆಪಿಯಿಂದ ನಮಗೆ ಸೂಚನೆ ಬಂದಿಲ್ಲ. ಹೈಕಮಾಂಡ್ ಎಲ್ಲೂ ಕೂಡಾ ಟಿಕೆಟ್ ಅವರಿಗೆ ಅಂತಾ ಹೇಳಿಲ್ಲ. ಜೆಡಿಎಸ್‌ಗೂ ಹೇಳಿಲ್ಲ, ನಮಗೂ ಹೇಳಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನನ್ನ ಗಮನ ಏನೇ ಇದ್ದರೂ ನನ್ನ ಜಿಲ್ಲೆಯ ಮೇಲೆ. ನನ್ನ ಬಗ್ಗೆ ಎಲ್ಲೂ ಕಪ್ಪು ಚುಕ್ಕಿ ಇಲ್ಲ ಎಂದು ಹೇಳಿದ್ದಾರೆ.
ನಾನು ರಾಜಕೀಯಕ್ಕೆ ಬಂದಿದ್ದೇ ಮಂಡ್ಯದಿಂದ. ಅಂಬರೀಶ್ 4 ಬಾರಿ ಗೆದ್ದಿದ್ದರು. ನನಗೂ ಜನ ಹೆಚ್ಚು ಮತ ಕೊಟ್ಟರು. ಅಂತಹ ಅಭಿಮಾನ ಬಿಟ್ಟು ಹೋಗೊಲ್ಲ ಎಂದು ಹೇಳಿದ್ದಾರೆ.