ಚಂದನವನದಲ್ಲಿ ಈಗ ತರುಣ್ ಸುಧೀರ್ (Tharun Sudhir) ಮತ್ತು ಸೋನಲ್ (Sonal) ಮದುವೆಯ ಸದ್ದು ಜೋರಾಗಿದೆ. ಇತ್ತೀಚೆಗಷ್ಟೇ ಕಲರ್‌ಫುಲ್ ಫೋಟೋಶೂಟ್ ಮೂಲಕ ಮದುವೆ ದಿನಾಂಕವನ್ನು ಹೇಳಲಾಗಿತ್ತು. ಇದರ ಬೆನ್ನಲ್ಲಿಯೇ ಆಮಂತ್ರಣ ಪತ್ರಿಕೆ ಕೂಡ ಸದ್ದು ಮಾಡುತ್ತಿದೆ.
ತರುಣ್ ಮತ್ತು ಸೋನಲ್ ಮಂಥೆರೋ ಮದುವೆ ಕಾರ್ಡ್ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮದುವೆ ಪತ್ರಿಕೆ ಮೇಲೆ ಇಬ್ಬರ ರೊಮ್ಯಾಂಟಿಕ್ ಫೋಟೋ ಹಾಕಿಸಿದ್ದು, ಒಳಗೆ ಮದುವೆ ಮುಹೂರ್ತ ಸಮಾರಂಭ ಕುರಿತು ಬರೆಯಲಾಗಿದೆ.
ತರುಣ್ ಸುಧೀರ್ ಮತ್ತು ಸೋನಲ್ ಜೋಡಿ ಇದೇ ಆಗಸ್ಟ್ 10, 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದೆ. ಮದುವೆಯು ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಎರಡು ದಿನದ ಸಮಾರಂಭವು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಆರ್.ವಿ ಕಾಲೇಜ್ ಹತ್ತಿರ ಇರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ಚಂದನವನದ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ಹಲವು ನಾಯಕರು, ಸಂಬಂಧಿಕರು, ಸ್ನೇಹಿತರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ದರ್ಶನ್ ನಟನೆಯ ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಸೋನಲ್ ನಟಿಸಿದ್ದರು. ಈ ಪರಿಚಯ ಈಗ ಮದುವೆಗೆ ಸಾಕ್ಷಿಯಾಗುತ್ತಿದೆ.








