ಬೆಂಗಳೂರು: ಶಾಸಕ ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುತ್ತಿದ್ದು, ಅವರನ್ನು ಉಚ್ಛಾಟಿಸಬೇಕೆಂದು ಬಿಜೆಪಿಯ ಹಲವು ನಾಯಕರು ಒತ್ತಡ ಹೇರಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುವಂತೆ ವರಿಷ್ಠರನ್ನು ಒತ್ತಾಯಿಸಲು ಪದಾಧಿಕಾರಿಗಳು ತೀರ್ವನಿಸಿದ್ದಾರೆ. ಹೀಗಾಗಿ ರಾಜ್ಯ ಕಾರ್ಯಾಲಯದಲ್ಲಿ ಬುಧವಾರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡದಿದ್ದರೆ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕುತ್ತದೆ. ಲೋಕಸಭಾ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವನ್ನು ನಾಯಕರು ವ್ಯಕ್ತಪಡಿಸಿದರು.
ಯತ್ನಾಳ್ ಕಾಂಗ್ರೆಸ್ ನ ಅದರಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಯಾವಾಗ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆಯೋ ಆಗ ಯತ್ನಾಳ್ರನ್ನು ಪ್ರಚೋದಿಸಿ ಅವರಿಂದ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿಸಲಾಗುತ್ತಿದೆ. ಅವರು ಹೇಳಿಕೆ ಕೊಟ್ಟ ನಂತರವೇ ಅವರ ಕಡತಗಳು ಕ್ಲಿಯರ್ ಆಗುತ್ತಿವೆ ಎಂದು ಹಲವು ಪದಾಧಿಕಾರಿಗಳು ಆರೋಪಿಸಿದ್ದಾರೆ.
ಅವರ ನಡೆಯ ಕುರಿತು ಹೈಕಮಾಂಡ್ ಗೆ ಪತ್ರ ಬರೆಯಬೇಕು. ಅದರಲ್ಲಿಯೂ ಉಚ್ಛಾಟನೆ ಮಾಡುವಂತೆ ಒತ್ತಾಯಿಸಬೇಕು. ವಿಜಯೇಂದ್ರ ದೆಹಲಿಗೆ ಹೋದ ಸಂದರ್ಭದಲ್ಲಿ ವರಿಷ್ಠರನ್ನು ಕಂಡು ಇಲ್ಲಿನ ಪರಿಸ್ಥಿತಿ ವಿವರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು.