ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ತಂಡವನ್ನ ಪ್ರಕಟಿಸಿದ್ದು, ಯುವ ಆಟಗಾರರಾದ ಸಂಜೂ ಸ್ಯಾಮ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಏಕದಿನ ತಂಡಕ್ಕೆ ಮರಳಿದ್ದಾರೆ.
ವಿಂಡೀಸ್ ವಿರುದ್ಧ ಭಾರತ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ರೋಹಿತ್ ಶರ್ಮ ನಾಯಕತ್ವದಲ್ಲಿ ಭಾತರ ಕಣಕ್ಕಿಳಿಯಲಿದ್ದರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಉಪ-ನಾಯಕನ ಪಟ್ಟ ನೀಡಲಾಗಿದೆ. ಉಭಯ ತಂಡಗಳ ನಡುವಿನ ಏಕದಿನ ಸರಣಿ ಜು.27ರಿಂದ ಆರಂಭವಾಗಲಿದ್ದು, ಜು.29ರಂದು 2ನೇ ಹಾಗೂ ಆಗಸ್ಟ್ 1ರಂದು 3ನೇ ಏಕದಿನ ಪಂದ್ಯ ನಡೆಯಲಿದೆ.
ಸಂಜೂ-ಋತುರಾಜ್ ವಾಪಸ್:
ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದು, ಫಾರ್ಮ್ ಸಮಸ್ಯೆಯಿಂದ ಹೊರಗುಳಿದಿದ್ದ ಋತುರಾಜ್ ಗಾಯಕ್ವಾಡ್ ಮತ್ತು ಸಂಜೂ ಸ್ಯಾಮ್ಸನ್ ಅವರಿಗೆ ವಿಂಡೀಸ್ ಪ್ರವಾಸದಲ್ಲಿ ಅವಕಾಶ ನೀಡಲಾಗಿದೆ. 2023ರ ಐಪಿಎಲ್‌ನಲ್ಲಿ ತೋರಿದ ಭರ್ಜರಿ ಫಾರ್ಮ್ ನೆರವಿನಿಂದಾಗಿ ಗಾಯಕ್ವಾಡ್ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದ್ದರೆ. ಎಲ್ಲರ ನಿರೀಕ್ಷೆಯಂತೆ ಸಂಜೂ ಸ್ಯಾಮ್ಸನ್ ಅವರಿಗೆ ಏಕದಿನ ತಂಡದಲ್ಲಿ ಮತ್ತೊಮ್ಮೆ ಅವಕಾಶ ನೀಡಲು ಆಯ್ಕೆ ಮಂಡಳಿ ತೀರ್ಮಾನಿಸಿದಂತಿದೆ.
ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಅವರಿಗೆ ಏಕದಿನ ಸರಣಿಗೂ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಇವರ ಜಾಗದಲ್ಲಿ ಉಮ್ರಾನ್ ಮಲ್ಲಿಕ್ ಅವರಿಗೆ ಅವಕಾಶ ನೀಡಿದ್ದು, ಇವರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ಏಕದಿನ ತಂಡ: ರೋಹಿತ್ ಶರ್ಮ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲ್ಲಿಕ್, ಜಯದೇವ್ ಉನಾದ್ಕತ್, ಮುಖೇಶ್ ಕುಮಾರ್.








