Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…
ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 21 ರನ್ಗಳ ಅಂತರದಿಂದ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 2-1 ಅಂತರದಿಂದ ಸರಣಿಯನ್ನ ಕೈ ವಶ ಮಾಡಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮೊದಲಿನಿಂದಲೂ ಗೆಲುವಿನತ್ತವೇ ಸಾಗಿತ್ತು. ಆದರೆ.. ಸೂರ್ಯ, ಪಾಂಡ್ಯ ಹಾಗೂ ಜಡೇಜಾ ವಿಕೆಟ್ ಕಬಳಿಸಿ ನಂತರ ಆಸ್ಟ್ರೇಲಿಯಾದ ಕೈ ಮೇಲೇರಿತು. ಕೊನೆಗೆ ಶಮಿ ಬೌಂಡರಿ ಸಿಕ್ಸರ್ ಮೂಲಕ ರನ್ ರೇಟ್ ಹೆಚ್ಚಿಸಿದರಾದರೂ ಉಪಯೋಗವಾಗಲಿಲ್ಲ.
ಭಾರತಕ್ಕೆ ಸೋಲು ಅನಿವಾರ್ಯವಾಯಿತು. 270 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ 49.1 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟಾಯಿತು. ಆಸೀಸ್ ಬೌಲರ್ಗಳ ಪೈಕಿ ಝಂಪಾ 4 ವಿಕೆಟ್, ಅಗರ್ 2 ವಿಕೆಟ್ ಪಡೆದರೆ, ಸ್ಟೊಯಿನಿಸ್ ಮತ್ತು ಶಾನ್ ಅಬಾಟ್ ತಲಾ ಒಂದು ವಿಕೆಟ್ ಹಂಚಿಕೊಂಡರು.
ಈ ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕಡಿಮೆ ಅವಧಿಯಲ್ಲಿ ವಿಕೆಟ್ಗಳುಪತನಗೊಂಡಿದ್ದು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಒಂದು ಹಂತದಲ್ಲಿ ಹಾರ್ದಿಕ್ ಪಾಂಡ್ಯ (40) ಅಬ್ಬರದ ಆಟವಾಡಿದ್ದರಿಂದ ಭಾರತದ ಗೆಲುವು ಸುಲಭ ಎನಿಸಿತು. ಆದಾಗ್ಯೂ, ಆಸೀಸ್ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಭಾರತ ಗೆಲುವಿಗೆ ತಡೆ ಒಡ್ಡಿದರು. ಝಂಪಾ 10 ಓವರ್ಗಳಲ್ಲಿ 45 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಟೀಂ ಇಂಡಿಯಾ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಗರಿಷ್ಠ 54 ರನ್ ಗಳಿಸಿ ಅರ್ಧ ಶತಕ ಸಿಡಿಸಿದ್ದಾರೆ. ಆರಂಭಿಕರಾದ ಶುಭಮನ್ ಗಿಲ್ 37 ರನ್, ನಾಯಕ ರೋಹಿತ್ ಶರ್ಮಾ 30 ರನ್ ಮತ್ತು ಕೆಎಲ್ ರಾಹುಲ್ 32 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಆಸೀಸ್ 49 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟಾಯಿತು. ಭಾರತದ ಬೌಲರ್ಗಳಾದ ಕುಲದೀಪ್ ಯಾದವ್ ಮತ್ತು ಪಾಂಡ್ಯ ತಲಾ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
ಸೂರ್ಯನಿಗೆ ಕವಿದ ಮಬ್ಬು
ಈ ನಡುವೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೂರನೇ ಏಕದಿನ ಪಂದ್ಯದಲ್ಲಿಯೂ ತೀವ್ರ ನಿರಾಸೆ ಅನುಭವಿಸಿದರು. ಆಡಿದ ಮೊದಲ ಎಸೆತದಲ್ಲಿಯೇ ಅಗರ್ ಎಸೆತದಲ್ಲಿ ಡಕ್ ಔಟ್ ಆಗಿ ಫೆವಿಲಿಯನ್ ಕಡೆ ತೆರಳಿದರು. ಸತತ ಮೂರನೇ ಬಾರಿಗೆ ಮೊದಲ ಎಸೆತದಲ್ಲಿಯೇ ಔಟಾಗಿದ್ದಾರೆ.
Ind vs Aus 3rd ODI : India lost an easily winnable match – Australia won the series…